ನವದೆಹಲಿ: 'ಭಾರತ ಜಾತ್ಯತೀತ ರಾಷ್ಟ್ರ. ಇಲ್ಲಿ ಪ್ರತಿಯೊಬ್ಬರಿಗೂ ಅವರ ಧರ್ಮದ ಮೇಲೆ ಹಕ್ಕಿದೆ' ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿತು. ಧಾರ್ಮಿಕ ವ್ಯಕ್ತಿ ಶ್ರೀ ಶ್ರೀ ಠಾಕೂರ್ ಅನುಕುಲ್ ಚಂದ್ರ ಅವರನ್ನು 'ಪರಮಾತ್ಮ' ಎಂದು ಘೋಷಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿತು.
'ಇದೊಂದು ಪ್ರಚಾರ ಪಡೆಯಲು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ' ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಸಿ.ಟಿ.ರವಿಕುಮಾರ್ ಅವರಿದ್ದ ಪೀಠವು ಅರ್ಜಿದಾರರಿಗೆ ₹ 1 ಲಕ್ಷ ದಂಡ ವಿಧಿಸಿ ಆದೇಶಿಸಿತು.
ಅರ್ಜಿದಾರರು ಅರ್ಜಿ ಓದುವುದನ್ನು ತಡೆದ ಪೀಠವು, 'ಇಲ್ಲಿ ಕೇಳಿ. ನಾವು ಉಪನ್ಯಾಸ ಕೇಳಲು ಕುಳಿತಿಲ್ಲ. ಇದು, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೇಗಾಗುತ್ತದೆ? ಯಾರಿಗೆ ಹೇಗೆ ಬೇಕೋ ಭಾವಿಸಲಿ. ಇದು, ಜಾತ್ಯತೀತ ರಾಷ್ಟ್ರ. ಇವರನ್ನೇ ಪ್ರಾರ್ಥಿಸಿ ಎಂದು ನಾಗರಿಕರಿಗೆ ಹೇಳಲಾಗದು' ಎಂದು ತಿಳಿಸಿತು.
ನಿರ್ದಿಷ್ಟ ಧರ್ಮವನ್ನು ಪಾಲಿಸಿ ಎಂದು ನಾವು ಹೇಗೆ ಜನರಿಗೆ ಹೇಳಲು ಸಾಧ್ಯ ಎಂದು ಪೀಠವು ಅರ್ಜಿದಾರರಿಗೆ ಪ್ರಶ್ನಿಸಿತು.
'ನಿಮಗೇ ಬೇಕಾದರೆ 'ಪರಮಾತ್ಮ' ಎಂದು ಭಾವಿಸಿಕೊಳ್ಳಿ. ಇನ್ನೊಬ್ಬರ ಮೇಲೆ ಅದನ್ನು ಹೇರುವುದು ಏಕೆ?' ಎಂದು ಅರ್ಜಿದಾರರಾದ ಉಪೇಂದ್ರನಾಥ ದಲಾಯಿ ಅವರಿಗೆ ತಿಳಿಸಿ ಅರ್ಜಿಯನ್ನು ವಜಾ ಮಾಡಿತು. ಅನುಕುಲ್ ಚಂದ್ರ ಅವರು ಬಾಂಗ್ಲಾದೇಶದ ಪಬ್ನಾದಲ್ಲಿ ಸೆಪ್ಟೆಂಬರ್ 14, 1888ರಲ್ಲಿ ಜನಿಸಿದ್ದರು.