ತಿರುವನಂತಪುರಂ: ಇಥಿಯೋಪಿಯಾದ ರಾಜಧಾನಿ ಅಡ್ಡಿಸ್ ಅಬಾಬ ಇಲ್ಲಿನ ನೇಟಿವಿಟಿ ಗರ್ಲ್ಸ್ ಸ್ಕೂಲ್ ಶಿಕ್ಷಕ ಮಥಾಯಸ್ ಅಬ್ರಹಾಂ ಅವರು ಕೇರಳ ಮೂಲದವರಾಗಿದ್ದಾರೆ. ಇದೀಗ ಅವರು ಕೇರಳದ ತಿರುವನಂತಪುರಂನ ಪಲಯಂ ಎಂಬಲ್ಲಿನ ತಮ್ಮ ಸಂಬಂಧಿಕರನ್ನು ಹುಡುಕಲು ರಾಜ್ಯಕ್ಕೆ ಆಗಮಿಸಿದ್ದಾರೆ.
ಅವರ ತಂದೆ ಕಲ್ಲುಂಕಲ್ ಅಬ್ರಹಾಂ ಜಾರ್ಜ್ ಕೊಟ್ಟಾಯಂನ ವೈದ್ಯ ಡಾ. ಕಲ್ಲುಂಕಲ್ ಅಬ್ರಹಾಂ ಜೋಸೆಫ್ ಅವರ ಪುತ್ರರಾಗಿದ್ದರು. ಅವರ ತಾಯಿ ಎಲಿಜಬೆತ್ ಅಲಿಯಾಸ್ ರಮಣಿ ಪಲಯಂ ನಗರದವರು ಎಂದು newindianexpress.com ವರದಿ ಮಾಡಿದೆ.
ಮಥಾಯಸ್ ಅವರು ಪಲಯಂನಲ್ಲಿ ಹುಟ್ಟಿದ್ದರು ಆದರೆ ಅವರಿಗೀಗ ಮಲಯಾಳಂ ಭಾಷೆ ಗೊತ್ತಿಲ್ಲ. ಆರು ತಿಂಗಳಿರುವಾಗ ಅವರನ್ನು ಅವರ ಹೆತ್ತವರು ಅಡ್ಡಿಸ್ ಅಬಾಬಾಗೆ ಕರೆದುಕೊಂಡು ಹೋಗಿದ್ದರು. ಅವರು ಇಥಿಯೋಪಿಯಾ ಮತ್ತು ಇಂಗ್ಲೆಂಡ್‌ನಲ್ಲಿ ಶಿಕ್ಷಣ ಪಡೆದಿದ್ದರು. 1985 ರಲ್ಲಿ ಅವರು ಈ ಹಿಂದೊಮ್ಮೆ ತಿರುವನಂತಪುರಂಗೆ ಬಂದಿದ್ದರು.
ಕೆಲವೊಂದು ಕೌಟುಂಬಿಕ ಕಾರಣಗಳಿಂದಾಗಿ ಅವರ ಹೆತ್ತವರು ಕೇರಳದ ತಮ್ಮ ಸಂಬಂಧಿಕರೊಂದಿಗೆ ಸಂಪರ್ಕ ಇರಿಸಿಕೊಂಡಿರಲಿಲ್ಲ. ಆದರೆ ಈ ಕಾರಣ ಮಥಾಯಸ್ ಅವರಿಗೆ ತಿಳಿದಿರಲಿಲ್ಲ.
ಇದೀಗ ಮಥಾಯಸ್ ಕೇರಳಕ್ಕೆ ಬಂದು ತಮ್ಮ ಸಂಬಂಧಿಕರನ್ನು ಹುಡುಕುತ್ತಿದ್ದಾರೆ. ತಮ್ಮ ಪೂರ್ವಜರ ಮನೆ ಪಲಯಂ ಇಲ್ಲಿನ ವೆಸ್ಟರ್ನ್ ಟೈಲರ್ಸ್ ಸಮೀಪ ಎಂದು ಅವರ ಹೆತ್ತವರು ಹೇಳಿದ್ದು ಅವರಿಗೆ ನೆನಪಿದೆ. ಸದ್ಯ ಅವರ ಪಾಲಿನ ಏಕೈಕ ಸಂಬಂಧ ಅಡ್ಡಿಸ್ ಅಬಾಬ ಇಲ್ಲಿರುವ ಅವರ ಸೋದರಿಯಾಗಿದ್ದಾರೆ.
ಆದರೆ ಪಲಯಂ ಇಲ್ಲಿನ ವೆಸ್ಟರ್ನ್ ಟೈಲರ್ಸ್ ದಶಕಗಳ ಹಿಂದೆ ಮುಚ್ಚಿದ್ದು ಈಗ ಅಲ್ಲಿ ಸಫಲ್ಯಂ ವಾಣಿಜ್ಯ ಸಂಕೀರ್ಣ ಇದೆ ಎಂದು ಸ್ಥಳೀಯ ಕೌನ್ಸಿಲರ್ ಪಲಯಂ ರಾಜನ್ ಹೇಳುತ್ತಾರೆ. ಮಥಾಯಸ್ ಅವರ ಸಂಬಂಧಿಗಳನ್ನು ಹುಡುಕಲು ತಾವು ಕೂಡ ಶ್ರಮಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.