ಭೋಪಾಲ್: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ವಿರೋಧ ಪಕ್ಷ ಕಾಂಗ್ರೆಸ್ ಬುಧವಾರ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಯಿತು.
ಈ ನಿರ್ಣಯಕ್ಕೆ ಸಂಬಂಧಿಸಿ ಎರಡು ದಿನಗಳ ಕಾಲ ಚರ್ಚೆ ನಡೆಸಲಾಯಿತು.
ಗುರುವಾರ ಧ್ವನಿ ಮತದ ವೇಳೆ ಈ ನಿರ್ಣಯಕ್ಕೆ ಸೋಲಾಯಿತು. ಬಳಿಕ ವಿಧಾನಸಭೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ನಿರುದ್ಯೋಗ, ಹಣದುಬ್ಬರ, ಭ್ರಷ್ಟಾಚಾರ ಹೆಚ್ಚಾಗಿದೆ, ವಿರೋಧ ಪಕ್ಷದ ನಾಯಕರ ವಿರುದ್ಧ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ, ಮಹಿಳೆಯರು ಮತ್ತು ಬುಡಕಟ್ಟು ಜನಾಂಗದವರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಈ ಕುರಿತ ಚರ್ಚೆಯು ವಿಧಾನಸಭೆಯಲ್ಲಿ ಬುಧವಾರ ಮಧ್ಯಾಹ್ನ 12.20ಕ್ಕೆ ಆರಂಭವಾಗಿ ಗುರುವಾರ ರಾತ್ರಿ 12.35ಕ್ಕೆ ಮುಕ್ತಾಯವಾಯಿತು. ಗುರುವಾರ 11 ಗಂಟೆಗೆ ಅವಿಶ್ವಾಸ ನಿರ್ಣಯವನ್ನು ಧ್ವನಿ ಮತಕ್ಕೆ ಹಾಕಲಾಯಿತು.