ನವದೆಹಲಿ: ಭಾರತೀಯ ರಾಜಕಾರಣದಲ್ಲಿ ಗಾಂಧಿ ಕುಟುಂಬ 'ಅತ್ಯಂತ ಕಡುಭ್ರಷ್ಟ ಕುಟುಂಬ' ಮತ್ತು 'ಕಟ್ಟರ್ ಪಾಪಿ ಪರಿವಾರ್' ಎಂದು ಗಾಂಧಿ ಕುಟುಂಬದ ವಿರುದ್ಧ ಬಿಜೆಪಿ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ವಿರುದ್ಧದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆ ರದ್ದುಪಡಿಸಲು ಕೋರಿದ್ದ ಮನವಿಯನ್ನು ರಾಜಸ್ಥಾನ ಹೈಕೋರ್ಟ್ ಕಳೆದ ವಾರ ತಿರಸ್ಕರಿಸಿದೆ.
ಇದನ್ನು ಉಲ್ಲೇಖಿಸಿರುವ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, 'ವಾದ್ರಾ ವಿರುದ್ಧದ ಭ್ರಷ್ಟಾಚಾರ ಮತ್ತು ಹಣ ಅಕ್ರಮ ವರ್ಗಾವಣೆ ಆರೋಪಗಳ ಬಗ್ಗೆ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ತಮ್ಮ ಮೌನ ಮುರಿಯಬೇಕು' ಎಂದು ಒತ್ತಾಯಿಸಿದ್ದಾರೆ.
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧದ ನ್ಯಾಷನಲ್ ಹೆರಾಲ್ಡ್ ಪ್ರಕರಣ ಉಲ್ಲೇಖಿಸಿರುವ ಗೌರವ್ ಭಾಟಿಯಾ, 'ಗಾಂಧಿ ಕುಟುಂಬದ ಮೂವರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದಾರೆ' ಎಂದು ಟೀಕಿಸಿದರು.
ವಾದ್ರಾ ವಿರುದ್ಧದ ಭ್ರಷ್ಟಾಚಾರ ಆರೋಪಗಳು ರಾಜಕೀಯ ಪ್ರೇರಿತವಾಗಿವೆ ಎಂದು ಕಾಂಗ್ರೆಸ್ ಮೊದಲಿನಿಂದಲೂ ಅಲ್ಲಗಳೆಯುತ್ತಾ ಬಂದಿದೆ.