ನವದೆಹಲಿ: ತನ್ನ ಬೇಡಿಕೆಗಳನ್ನು ಈಡೇರಿಸದಿದ್ದರೆ ಸಂಸತ್ತನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಮಧ್ಯ ಪ್ರದೇಶದ ಮಾಜಿ ಶಾಸಕ ಕಿಶೋರ್ ಸಮ್ರಿತ್ ಅವರಿಗೆ ದೆಹಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ,
ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ಅವರು, ಸಂಸತ್ ಸ್ಫೋಟ ಬೆದರಿಕೆಯಿಂದ ಯಾವುದೇ ರೀತಿಯ ಸ್ಫೋಟ ಅಥವಾ ಪ್ರಾಣ ಅಥವಾ ಆಸ್ತಿಪಾಸ್ತಿ ಹಾನಿಗೆ ಕಾರಣವಾಗಿಲ್ಲ ಮತ್ತು ಪ್ರಕರಣದ ತನಿಖೆ ಈಗಾಗಲೇ ಪೂರ್ಣಗೊಂಡಿದೆ ಎಂದು ಆರೋಪಿ ಶಾಸಕನಿಗೆ ರಿಲೀಫ್ ನೀಡಿದ್ದಾರೆ.
2022ರ ಸೆಪ್ಟೆಂಬರ್ 16 ರಂದು ಸಂಸತ್ ಭವನಕ್ಕೆ ಸ್ಪೀಡ್ ಪೋಸ್ಟ್ ಮೂಲಕ ಭಾರತದ ಧ್ವಜ ಮತ್ತು ಭಾರತದ ಸಂವಿಧಾನದ ಪ್ರತಿಯನ್ನು ಹೊರತುಪಡಿಸಿ ಸ್ಫೋಟಕಗಳಿಗೆ ಸಂಬಂಧಿಸಿದ ಅನುಮಾನಾಸ್ಪದ ವಸ್ತುವನ್ನು ಹೊಂದಿದ್ದ ಪಾರ್ಸೆಲ್ ಕಳುಹಿಸಲಾಗಿತ್ತು. ಈ ಪಾರ್ಸೆಲ್ ನಲ್ಲಿ ಕಿಶೋರ್ ಅವರು ಸಹಿ ಮಾಡಿದ್ದ 10 ಪುಟಗಳ ಪತ್ರವೂ ಇತ್ತು.
ಪತ್ರದಲ್ಲಿ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಕಿಶೋರ್ ಅವರು, ತಮ್ಮ 70 ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದರೆ 2022ರ ಸೆಪ್ಟೆಂಬರ್ 30 ರಂದು ಸಂಸತ್ ಭವನ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದರು.
ನಂತರ ಸೆಪ್ಟೆಂಬರ್ 19 ರಂದು ಮಧ್ಯಪ್ರದೇಶದ ಬಾಲಾಘಾಟ್‌ನ ಲಾಂಜಿಯ ಮಾಜಿ ಶಾಸಕ ಕಿಶೋರ್ ಅವರನ್ನು ಬಂಧಿಸಲಾಗಿತ್ತು.