ನವದೆಹಲಿ: ಮತದಾರರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಚುನಾವಣಾ ಆಯೋಗವು ದೇಶೀಯ ವಲಸೆ ಮತದಾರರಿಗಾಗಿ ರಿಮೋಟ್ ಎಲೆಕ್ಟ್ರಾನಿಕ್ ಮತಯಂತ್ರವನ್ನು (ಆರ್‌ವಿಎಂ) ಅಭಿವೃದ್ಧಿಪಡಿಸಿದೆ.
ಜನವರಿ 16ರಂದು ಇದರ ಪ್ರದರ್ಶನಕ್ಕೆ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಆಹ್ವಾನ ನೀಡಿದೆ.
ಈ ಕುರಿತಂತೆ ಚರ್ಚೆ ನಡೆದು ರಿಮೋಟ್ ಇವಿಎಂ ಜಾರಿಗೆ ಬಂದರೆ, ವಲಸೆ ಕಾರ್ಮಿಕರು ಮತದಾನ ಮಾಡಲು ತಮ್ಮ ತವರು ಕ್ಷೇತ್ರಕ್ಕೆ ಹೋಗುವ ಅಗತ್ಯವೇ ಇರುವುದಿಲ್ಲ. ಇದ್ದಲ್ಲಿಯೇ ಮತದಾನ ಮಾಡಬಹುದು.
ರಿಮೋಟ್ ಮತದಾನದ ಪರಿಕಲ್ಪನೆಯನ್ನು ಕಾರ್ಯಗತಗೊಳಿಸುವಲ್ಲಿ ಕಾನೂನು, ಆಡಳಿತಾತ್ಮಕ ಮತ್ತು ತಾಂತ್ರಿಕ ಸವಾಲುಗಳ ಕುರಿತು ರಾಜಕೀಯ ಪಕ್ಷಗಳಿಂದ ಚುನಾವಣಾ ಆಯೋಗವು ಅಭಿಪ್ರಾಯಗಳನ್ನು ಕೇಳಿದೆ.
ಸಾರ್ವಜನಿಕ ವಲಯದ ಉದ್ಯಮದಿಂದ ಅಭಿವೃದ್ಧಿಪಡಿಸಲಾಗಿರುವ ರಿಮೋಟ್ ಇವಿಎಂ ಇದಾಗಿದ್ದು, ಒಂದೇ ಮತಗಟ್ಟೆಯಿಂದ 72 ಕ್ಷೇತ್ರಗಳನ್ನು ನಿರ್ವಹಿಸಬಹುದಾಗಿದೆ.
'ಮತದಾನದ ಬಗ್ಗೆ ಯುವಕರು ಮತ್ತು ನಗರದ ನಿವಾಸಿಗಳ ನಿರಾಸಕ್ತಿಗಳ ಬಗ್ಗೆ ಗಮನ ಹರಿಸಿದ ನಂತರ, ರಿಮೋಟ್ ಮತದಾನವು ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಪರಿವರ್ತನೆಯ ಉಪಕ್ರಮವಾಗಿದೆ' ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ಹೇಳಿದ್ದಾರೆ.