ಗಂಭೀರ ಅಪಘಾತಕ್ಕೆ ಒಳಗಾಗುವ ವ್ಯಕ್ತಿಗಳು ಅನುಭವಿಸುವ ನೋವು ಮತ್ತು ಸಂಕಟವನ್ನು ಯಾವುದೇ ಮೊತ್ತದ ಹಣ ಅಥವಾ ಇತರ ಭೌತಿಕ ಪರಿಹಾರವು ಹೋಗಲಾಡಿಸಲಾರದು, ಆದರೆ ಆರ್ಥಿಕ ಪರಿಹಾರವು ಜೀವನಕ್ಕೆ ಭದ್ರತೆ ನೀಡುತ್ತದೆ ಎಂದು ಸುಪ್ರೀಂ ಕೋರ್ಟ್(Supreme Court) ಹೇಳಿದೆ.
ನಿರ್ದಿಷ್ಟ ಅಂಗವೈಕಲ್ಯವನ್ನು ಗಣನೆಗೆ ತೆಗೆದುಕೊಂಡು ನ್ಯಾಯೋಚಿತ ಪರಿಹಾರವನ್ನು ಸಂತ್ರಸ್ತನಿಗೆ ನೀಡಬೇಕು ಎಂದು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ(Krishna Murari) ಮತ್ತು ಎಸ್. ರವೀಂದ್ರ ಭಟ್(S. Rabindra Bhatt) ಅವರನ್ನೊಳಗೊಂಡ ಪೀಠವು ಹೇಳಿತು.
ಗಂಭೀರ ಅಪಘಾತವೊಂದು ನಡೆದ ಬಳಿಕ ವ್ಯಕ್ತಿಯು ಅನುಭವಿಸುವ ನೋವು ಮತ್ತು ಸಂಕಟವನ್ನು ಯಾವುದೇ ಮೊತ್ತದ ಹಣ ಅಥವಾ ಭೌತಿಕ ವಸ್ತುಗಳು ಹೋಗಲಾಡಿಸಲಾರವು ಅಥವಾ ಕಳೆದು ಹೋಗಿರುವ ಪ್ರೀತಿ ಪಾತ್ರ ವ್ಯಕ್ತಿಯನ್ನು ಮರಳಿಸಲಾರದು. ಆದರೆ ಆರ್ಥಿಕ ಪರಿಹಾರದ ಮೂಲಕ ಸಮಾಜವು ಸಂತ್ರಸ್ತರ ಬದುಕುಗಳಲ್ಲಿ ಭರವಸೆ ತುಂಬಬಹುದು ಹಾಗೂ ಮುಂದಿನ ಜೀವನವನ್ನು ಅವರು ಎದುರಿಸುವಂತೆ ಮಾಡಬಹುದು'' ಎಂದು ನ್ಯಾಯಾಲಯ ಹೇಳಿದೆ.
ಕರ್ನಾಟಕದ ಬೀದರ್ ನಲ್ಲಿ ಸರಕಾರಿ ಆಸ್ಪತ್ರೆಯೊಂದರ ನಿರ್ಮಾಣದ ವೇಳೆ ಗಾಯಗೊಂಡಿರುವ ಕಾರ್ಮಿಕ ಮಹಿಳೆಯೊಬ್ಬರಿಗೆ 9.30 ಲಕ್ಷ ರೂಪಾಯಿ ಪರಿಹಾರ ನೀಡಿದ ನ್ಯಾಯಾಲಯವು, ತನ್ನ ಈ ಅಭಿಪ್ರಾಯವನ್ನು ವ್ಯಕ್ತಿಪಡಿಸಿದೆ.
2015 ಜುಲೈ 22ರಂದು, ಅರ್ಜಿದಾರರ ತಲೆಯ ಮೇಲೆ ಸೆಂಟರಿಂಗ್ ಹಲಗೆಯೊಂದು ಬಿದ್ದಾಗ ಅವರು ಎರಡನೇ ಮಹಡಿಯಿಂದ ನೆಲ ಮಹಡಿಗೆ ಬಿದ್ದರು. ಅವರ ಬೆನ್ನು ಮೂಳೆಗೆ ಗಾಯವಾಗಿದೆ ಹಾಗೂ ದೇಹದ ವಿವಿಧ ಭಾಗಗಳಲ್ಲಿ ಗಾಯಗಳಾಗಿವೆ ಎಂಬುದಾಗಿ ಅವರಿಗೆ ಚಿಕಿತ್ಸೆ ನೀಡಿರುವ ವೈದ್ಯರು ಹೇಳಿದ್ದರು.
ಅಪಘಾತದ ಬಳಿಕ ಅವರಿಗೆ ಕಾರ್ಮಿಕ ವೃತ್ತಿಯನ್ನು ಮುಂದುವರಿಸಲು ಅಸಾಧ್ಯವಾಯಿತು. ಆದರೆ, ಹೈಕೋರ್ಟ್ ಅವರಿಗೆ ಪರಿಹಾರವನ್ನು ನೀಡಲು ನಿರಾಕರಿಸಿತು.
''ಈ ಪ್ರಕರಣದಲ್ಲಿ ಹೈಕೋರ್ಟ್ನ ತೀರ್ಪು ಕಾರ್ಯಸಾಧುವಲ್ಲ ಎಂಬ ಅಭಿಪ್ರಾಯ ನಮ್ಮದು'' ಎಂದು ಸುಪ್ರೀಂ ಕೋರ್ಟ್ ಹೇಳಿತು.