ಮ್ಯಾನ್ಮಾರ್‌ನಲ್ಲಿ ಹಿಂಸೆಗೆ ಅಂತ್ಯ ಹಾಡಲು ಹಾಗೂ ಆಂಗ್ ಸನ್ ಸೂ ಕಿ ಸಹಿತ ಆ ದೇಶದಲ್ಲಿರುವ ಎಲ್ಲಾ ರಾಜಕೀಯ ಕೈದಿಗಳನ್ನು ಬಿಡುಗಡೆಗೊಳಿಸಲು ಅಲ್ಲಿನ ಮಿಲಿಟರಿ ಆಡಳಿತಗಾರರ ಮೇಲೆ ಒತ್ತಡ ಹೇರಲು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದ ಮೇಲೆ ಬುಧವಾರ ನಡೆದ ಮತದಾನದಿಂದ ಭಾರತ ದೂರ ಉಳಿದಿದೆ.
ಈ ತಿಂಗಳು ಭಾರತದ ಅಧ್ಯಕ್ಷತೆಯಲ್ಲಿರುವ 15 ಸದಸ್ಯರ ಭದ್ರತಾ ಮಂಡಳಿ 74 ವರ್ಷಗಳಲ್ಲಿಯೇ ಮೊದಲ ಬಾರಿಗೆ ಮ್ಯಾನ್ಮಾರ್ ಕುರಿತ ತನ್ನ ಮೊದಲ ನಿರ್ಣಯ ಕೈಗೆತ್ತಿಕೊಂಡಿತ್ತು. 12 ಸದಸ್ಯ ರಾಷ್ಟ್ರಗಳು ನಿರ್ಣಯದ ಪರ ಮತ ಚಲಾಯಿಸಿದರೆ, ಚೀನಾ ರಷ್ಯಾ ಮತ್ತು ಭಾರತ ಮತದಾನದಿಂದ ದೂರವುಳಿದಿವೆ.
ಮ್ಯಾನ್ಮಾರ್‌ನಲ್ಲಿನ ಕ್ಲಿಷ್ಟ ಪರಿಸ್ಥಿತಿಯನ್ನು ತಾಳ್ಮೆಯ ರಾಜತಾಂತ್ರಿಕತೆಯ ಮೂಲಕ ನಿಭಾಯಿಸಬೇಕೆಂದು ಭಾರತ ನಂಬಿದೆ ಎಂದು ವಿಶ್ವ ಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಂಬೋಜ್ ಹೇಳಿದರು.
ಪ್ರಸ್ತುತ ಬಿಕ್ಕಟ್ಟನ್ನು ಪರಿಹರಿಸುವ ಜೊತೆಗೆ ಅಲ್ಲಿ ಶಾಂತಿ ಸುಸ್ಥಿರತೆ ಮತ್ತು ಸಮೃದ್ಧಿ ನೆಲೆಯೂರುವುದು ನಮ್ಮ ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಯಲ್ಲಿದೆ ಎಂದು ಅವರು ಹೇಳಿದರು.