ನವದೆಹಲಿ: ದೆಹಲಿಯ ಏಮ್ಸ್ ವೆಬ್‌ಸೈಟ್ ಮೇಲೆ ಸೈಬರ್ ದಾಳಿ ಬಳಿಕ ಇದೀಗ ಭಾರತೀಯ ವೈದ್ಯಕೀಯ ಸಂಶೋಧನೆ ಮಂಡಳಿ(ಐಸಿಎಂಆರ್) ತಾಣದ ಮೇಲೂ 6,000 ಸಲ ದಾಳಿ ಯತ್ನ ನಡೆದಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ದಾಳಿಗಳ ಹಿಂದೆ ಚೀನಾ ಕೈವಾಡವಿರುವ ಶಂಕೆ ವ್ಯಕ್ತವಾಗುತ್ತಿದೆ.
ನ.30 ರಂದು ಏಮ್ಸ್ ವೆಬ್ ಮೇಲೆ ಸೈಬರ್ ದಾಳಿ ನಡೆದಿತ್ತು. ಅದಾಗಿ 24 ಗಂಟೆ ಅವಧಿಯಲ್ಲಿ ಐಸಿಎಂಆರ್ ವೆಬ್ ಹ್ಯಾಕ್ ಮಾಡುವ ಯತ್ನ ನಡೆದಿದೆ. ಇದು ರಾಷ್ಟ್ರೀಯ ಭದ್ರತೆಗೆ ಎಚ್ಚರಿಕೆ ಗಂಟೆ ಎಂದು ತಜ್ಞರು ಹೇಳಿದ್ದಾರೆ.
ಹಾಂಕಾಂಗ್ ಮೂಲದ ಐಪಿ ಇಂದ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 'ಐಸಿಎಂಆರ್ ವೆಬ್‌ಸೈಟ್ ಸುರಕ್ಷಿತವಾಗಿದೆ. ರಾಷ್ಟ್ರೀಯ ತಂತ್ರಜ್ಞಾನ ಮಾಹಿತಿ ಕೇಂದ್ರ(ಎನ್‌ಐಐಸಿ) ಈ ವೆಬ್ ನಿರ್ವಹಣೆ ಮಾಡುತ್ತಿದೆ. ಎನ್‌ಐಸಿ ಸೈಬರ್ ದಾಳಿಯ ಕುರಿತು ಮಾಹಿತಿ ನೀಡಿದ್ದು, ದಾಳಿಯನ್ನು ತಡೆದಿರುವುದಾಗಿ ಸಂದೇಶ ನೀಡಿದೆ' ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಸೈಬರ್ ದಾಳಿಗಳ ಹಿಂದೆ ಚೀನಾ ಕೈವಾಡವಿದೆ ಎಂಬ ಶಂಕೆಯನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ದಿನಗಳಿಂದ, ರಾಷ್ಟ್ರೀಯ ಸೈಬರ್ ಭದ್ರತಾ ಸಂಯೋಜಕ ಲೆಫ್ಟಿನೆಂಟ್ ಜನರಲ್ (ನಿವೃತ್ತ) ರಾಜೇಶ್ ಪಂತ್ ನೇತೃತ್ವದ ಸಿಇಆರ್‌ಟಿ, ಎನ್‌ಐಸಿ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಯ ತಜ್ಞರು ದೆಹಲಿಯ ಏಮ್ಸ್ ಸರ್ವರ್‌ಗಳಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ಇತ್ತೀಚಿನ ಸೈಬರ್ ದಾಳಿಯಲ್ಲಿ ಏಮ್ಸ್‌ನ 100 ಭೌತಿಕ ಮತ್ತು ವರ್ಚುವಲ್ ಸರ್ವರ್‌ಗಳಲ್ಲಿ 5 ಕರಪ್ಟ್ ಆಗಿದೆ.
ದೆಹಲಿಯ ಮತ್ತೊಂದು ಆಸ್ಪತ್ರೆಯ ವೆಬ್ ಮೇಲೂ ಸೈಬರ್ ದಾಳಿ ನಡೆದ ವರದಿಯಾಗಿದೆ. ಆದರೆ ಸರ್ಕಾರದ ಅಧಿಕಾರಿಗಳು ಈ ದಾಳಿಯನ್ನು ಅಲ್ಲಗಳೆದಿದ್ದಾರೆ. ಚೀನಾ ಕೈವಾಡದ ಶಂಕೆ ಇಲ್ಲ. ಇದೆಲ್ಲ ವದಂತಿಯಷ್ಟೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಹೇಳುತ್ತಿದ್ದಾರೆ.