ನವದೆಹಲಿ: ಕಳೆದ ಹಲವು ದಶಕಗಳಲ್ಲಿ ಸಾವಿರಾರು ಜನರ ಸಾವಿಗೆ ಕಾರಣವಾಗಿರುವ ತೀವ್ರ ಬಿಸಿಲಿನ ಧಗೆಯು (Heat Waves) ಭಾರತದಲ್ಲಿ ಆತಂಕಕಾರಿಯಾಗಿ ಏರಿಕೆಯಾಗುತ್ತಿದ್ದು ಮನುಷ್ಯರ ಸಹಿಸಿಕೊಳ್ಳುವ ಸಾಮರ್ಥ್ಯವನ್ನು ಮೀರುವಷ್ಟು ಬಿಸಿಲಿನ ತಾಪವುಂಟಾಗಲಿರುವ ಜಗತ್ತಿನ ಮೊದಲ ಕೆಲ ಸ್ಥಳಗಳಲ್ಲಿ ಭಾರತ (India) ಕೂಡ ಒಂದಾಗಲಿದೆ ಎಂದು ವಿಶ್ವ ಬ್ಯಾಂಕಿನ (World Bank) ಹೊಸ ವರದಿಯೊಂದು ಹೇಳಿದೆ.
"ಕ್ಲೈಮೇಟ್ ಇನ್ವೆಸ್ಟ್‌ಮೆಂಟ್ ಆಪೊರ್ಚುನಿಟೀಸ್ ಇನ್ ಇಂಡಿಯಾಸ್ ಕೂಲಿಂಗ್ ಸೆಕ್ಟರ್" ಎಂಬ ಹೆಸರಿನ ಈ ವರದಿಯ ಪ್ರಕಾರ ದೇಶದಲ್ಲಿ ಅವಧಿಗಿಂತ ಮೊದಲೇ ತಾಪಮಾನಗಳು ಏರಿಕೆಯಾಗಿ ಈ ಏರಿಕೆಯಾದ ತಾಪಮಾನಗಳು ಬಹಳ ಸಮಯ ಉಳಿದುಕೊಳ್ಳುತ್ತವೆ ಎಂದು ಹೇಳಿದೆ.
ಕೇರಳ ಸರ್ಕಾರದ ಸಹಯೋಗದೊಂದಿಗೆ ವಿಶ್ವ ಬ್ಯಾಂಕ್ ಆಯೋಜಿಸಲಿರುವ ಎರಡು ದಿನಗಳ ʻಇಂಡಿಯಾ ಕ್ಲೈಮೇಟ್ ಎಂಡ್ ಡೆವಲೆಪ್ಮೆಂಟ್ ಪಾರ್ಟ್‌ನರ್ಸ್ ಮೀಟ್ʼನಲ್ಲಿ ಈ ವರದಿ ಬಿಡುಗಡೆಗೊಳ್ಳಲಿದೆ.
ದೇಶಾದ್ಯಂತ ತಾಪಮಾನ ಏರಿಕೆಯಿಂದ ಆರ್ಥಿಕ ಉತ್ಪಾದಕೀಯತೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ವರದಿ ಹೇಳಿದೆ. "ಭಾರತದ ಶೇ 75 ರಷ್ಟು ಶ್ರಮಿಕ ವರ್ಗ ಅಥವಾ 38 ಕೋಟಿ ಜನರು ಬಿಸಿಲಿಗೆ ಒಡ್ಡಿಕೊಂಡು ಕೆಲಸ ಮಾಡುವವರು. 2030ರ ವೇಳೆಗೆ ಜಾಗತಿಕವಾಗಿ ಏರುತ್ತಿರುವ ತಾಪಮಾನದಿಂದಾಗಿ ಉಂಟಾಗಲಿರುವ 8 ಕೋಟಿ ಉದ್ಯೋಗ ನಷ್ಟಗಳ ಪೈಕಿ ಭಾರತದಲ್ಲಿ 3.4 ಕೋಟಿ ಉದ್ಯೋಗ ನಷ್ಟವಾಗಬಹುದು ಎಂದು ವರದಿ ಹೇಳಿದೆ.