ನವದೆಹಲಿ: ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹೊರಡಿಸಿದ್ದ ಅಧಿಸೂಚನೆಗೆ ನೀಡಿದ್ದ ತಡೆಯನ್ನು ಸೋಮವಾರ ಮುಂದುವರಿಸಿದೆ.
ಕೆಲ ನಿರ್ಮಾಣ ಯೋಜನೆಗಳಿಗೆ ಅನುವು ಮಾಡಿಕೊಡುವುದಕ್ಕಾಗಿ ಪರಿಸರದ ಮೇಲಾಗುವ ಪರಿಣಾಮದ ಮೌಲ್ಯಮಾಪನ (ಇಐಎ) ಷರತ್ತುಗಳನ್ನು ಮಾರ್ಪಡಿಸಿದ್ದ ಕೇಂದ್ರ ಪರಿಸರ ಸಚಿವಾಲಯವು ಈ ಸಂಬಂಧ 2018ರ ನವೆಂಬರ್ 14ರಂದು ಅಧಿಸೂಚನೆ ಹೊರಡಿಸಿತ್ತು.
ಅದೇ ವರ್ಷದ ಡಿಸೆಂಬರ್‌ನಲ್ಲಿ ಅರ್ಜಿಯೊಂದರ ವಿಚಾರಣೆ ನಡೆಸಿದ್ದ ಎನ್‌ಜಿಟಿ, ಇದಕ್ಕೆ ತಡೆ ನೀಡಿತ್ತು.
'ಪರಿಸರ ಸಚಿವಾಲಯ ಈವರೆಗೂ ಯಾವುದೇ ಪ್ರತಿಕ್ರಿಯೆ ಸಲ್ಲಿಸಿಲ್ಲ. ಸಚಿವಾಲಯದ ಯಾವೊಬ್ಬ ಪ್ರತಿನಿಧಿಯೂ ನ್ಯಾಯಮಂಡಳಿ ಎದುರು ಹಾಜರಾಗಿಲ್ಲ. ಹೀಗಾಗಿ ಈ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳುವವರೆಗೂ ತಡೆಯಾಜ್ಞೆ ಮುಂದುವರಿಸಲಾಗುತ್ತದೆ' ಎಂದು ನ್ಯಾಯಮೂರ್ತಿ ಎ.ಕೆ.ಗೋಯಲ್ ನೇತೃತ್ವದ ನ್ಯಾಯಮಂಡಳಿ ತಿಳಿಸಿದೆ.