ನವದೆಹಲಿ : ಅರುಣಾಚಲಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ನಡೆದಿದ್ದ ಸೇನಾ ಸಂಘರ್ಷದ ಬೆನ್ನಲ್ಲೇ ಪೂರ್ವ ಲಡಾಖ್‌ನಲ್ಲಿ ಶಾಂತಿ ಮರುಸ್ಥಾಪಿಸುವ ಸಂಬಂಧ ಭಾರತ ಮತ್ತು ಚೀನಾ ನಡುವೆ ಇದೇ 20ರಂದು ಉನ್ನತ ಮಟ್ಟದ ಮಿಲಿಟರಿ ಮಾತುಕತೆ ನಡೆಸಲಾಗಿದೆ.
ಆದರೆ ಇದು ಅಷ್ಟೇನೂ ಫಲಪ್ರದವಾಗಿಲ್ಲ.
'ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಸಮಸ್ಯೆಗಳನ್ನು ಸಾಧ್ಯವಾದಷ್ಟು ಬೇಗ ಪರಿಹರಿಸಿಕೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ' ಎಂದು ಗುರುವಾರ ಬಿಡುಗಡೆ ಮಾಡಲಾಗಿರುವ ಜಂಟಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗಡಿ ಬಿಕ್ಕಟ್ಟು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಉಭಯ ದೇಶಗಳ ನಾಯಕರು ನೀಡಿದ್ದ ಮಾರ್ಗದರ್ಶನದ ಅನುಸಾರ ಮುಕ್ತ ಹಾಗೂ ಸವಿಸ್ತಾರವಾಗಿ ಮಾತುಕತೆ ನಡೆಸಲಾಗಿದೆ. ಭಾರತ ಮತ್ತು ಚೀನಾ ಸೇನಾ ಕಮಾಂಡರ್‌ಗಳ ಮಟ್ಟದ 17ನೇ ಸುತ್ತಿನ ಈ ಸಭೆಯು ಚೀನಾದ ಚುಶುಲ್ ಮೊಲ್ಡೊ ಗಡಿ ಪ್ರದೇಶದಲ್ಲಿ ನಡೆದಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾಗಿ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಬಿಕ್ಕಟ್ಟನ್ನು ಬೇಗ ಪರಿಹರಿಸಿಕೊಳ್ಳಲು ಒತ್ತು ನೀಡಬೇಕು. ಅದರಿಂದ ಪಶ್ಚಿಮ ವಲಯದ (ಪೂರ್ವ ಲಡಾಖ್) ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಶಾಂತಿ ಮರುಸ್ಥಾಪನೆಗೆ ಅನುವಾಗಲಿದೆ. ದ್ವಿಪಕ್ಷೀಯ ಸಂಬಂಧದಲ್ಲಿ ಪ್ರಗತಿ ಸಾಧಿಸಲೂ ಸಹಕಾರಿಯಾಗಲಿದೆ' ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.
'ಪಶ್ಚಿಮ ವಲಯದಲ್ಲಿ ಭದ್ರತೆ ಮತ್ತು ಸ್ಥಿರತೆ ಕಾಪಾಡಿಕೊಳ್ಳಲು ಉಭಯ ಕಡೆಯವರು ಸಮ್ಮತಿ ಸೂಚಿಸಿದ್ದಾರೆ. ಮಿಲಿಟರಿ ಮಾತುಕತೆ, ರಾಜತಾಂತ್ರಿಕ ಮಾರ್ಗ ಹಾಗೂ ಪರಸ್ಪರ ಸ್ವೀಕಾರ್ಹವಾದ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಬಾಕಿ ಉಳಿದಿರುವ ಸಮಸ್ಯೆಗಳನ್ನು ಸಾಧ್ಯವಾದಷ್ಟು ಬೇಗ ಪರಿಹರಿಸಿಕೊಳ್ಳುವುದಕ್ಕೂ ಉಭಯ ಕಡೆಯವರು ಒಪ್ಪಿಗೆ ನೀಡಿದ್ದಾರೆ' ಎಂದೂ ವಿವರಿಸಲಾಗಿದೆ.
'ಡೆಮ್‌ಚೊಕ್ ಮತ್ತು ಡೆಪ್ಸಾಂಗ್‌ನ ಘರ್ಷಣಾ ಬಿಂದುಗಳಲ್ಲಿನ ಸಮಸ್ಯೆಯನ್ನು ಅತಿ ಶೀಘ್ರವೇ ಬಗೆಹರಿಸಬೇಕು ಎಂದು ಭಾರತ ಒತ್ತಾಯಿಸಿತು. ಈ ಸಭೆ ಸುಮಾರು 10 ಗಂಟೆಗಳ ಕಾಲ ನಡೆಯಿತು' ಎಂದೂ ತಿಳಿಸಲಾಗಿದೆ.