ನವದೆಹಲಿ: ಅರುಣಾಚಲ ಪ್ರದೇಶದ ಗಡಿ ದಾಟಿ ನುಗ್ಗಲು ಯತ್ನಿಸಿದ್ದ ಚೀನಿ ಪಡೆಗಳನ್ನು ಭಾರತೀಯ ಮಿಲಿಟರಿ ಕಮಾಂಡರ್ಗಳು ಹಿಮ್ಮೆಟ್ಟಿಸಿದೆಯಾದರೂ ತವಾಂಗ್ ಗಡಿಯಲ್ಲಿ ಚೀನಾ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸಿರುವುದು ಸ್ಯಾಟಲೈಟ್ ಚಿತ್ರಗಳಿಂದ ತಿಳಿದು ಬಂದಿದೆ.
ಅರುಣಾಚಲ ಪ್ರದೇಶ ಸಮೀಪವೇ ಚೀನಾದ ದ್ವಿಬಳಕೆಯ ವಿಮಾನ ನಿಲ್ದಾಣವೂ ಪತ್ತೆಯಾಗಿದೆ.
ಅರುಣಾಚಲ ಗಡಿ ಸಮೀಪದಲ್ಲಿ ಚೀನಾ ನಿರ್ಮಿಸುತ್ತಿರುವ ಶಿಗಾಟ್ಸೆ ಶಾಂತಿ ವಿಮಾನ ನಿಲ್ದಾಣವು ದ್ವಿಬಳಕೆಯದ್ದಾಗಿದೆ. ಮೇಲ್ನೋಟಕ್ಕೆ ಇದು ನಾಗರಿಕರ ಪ್ರಯಾಣಕ್ಕೆ ಇರುವ ವಿಮಾನ ನಿಲ್ದಾಣದಂತೆ ಕಂಡು ಬಂದರೂ ಯುದ್ಧವಿಮಾನಗಳೂ ಅಲ್ಲಿವೆ! ಫೈಟರ್ ಜೆಟ್‌ಗಳು, ವಾರ್ನಿಂಗ್ ಜೆಟ್‌ಗಳು ಮತ್ತು ಮಾನವರಹಿತ ವೈಮಾನಿಕ ವಿಮಾನಗಳು ಕೂಡ ಇಲ್ಲಿಂದಲೇ ಕಾರ್ಯಾಚರಣೆ ನಡೆಸಬಹುದು. ಅರುಣಾಚಲದ ತವಾಂಗ್‌ನಲ್ಲಿರುವ ವಾಸ್ತವ ಗಡಿ ರೇಖೆ(ಎಲ್‌ಎಸಿ) ಬಳಿ ಭಾರತ-ಚೀನಾ ಗಡಿಯಿಂದ ಸುಮಾರು 155 ಕಿಮೀ ಉತ್ತರಕ್ಕೆ ವಿಮಾನ ನಿಲ್ದಾಣವನ್ನು ಸಿದ್ಧಪಡಿಸಲಾಗುತ್ತಿದೆ.
ಡಿ.9ರಂದು ತವಾಂಗ್ನ ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸುವ ಮೂಲಕ ಅರುಣಾಚಲ ಪ್ರದೇಶಕ್ಕೆ ಚೀನಾ ಯೋಧರು ಅತಿಕ್ರಮ ಪ್ರವೇಶಿಸುತ್ತಿದ್ದರು. ಇದನ್ನು ಭಾರತೀಯ ಯೋಧರು ತಡೆದಿದ್ದು, ಈ ವೇಳೆ ಘರ್ಷಣೆ ಉಂಟಾಗಿತ್ತು. ಇದಾದ ಬಳಿಕ ಚೀನಾದ ಚಟುವಟಿಕೆಗಳನ್ನು ಅರಿಯಲು ಗಡಿಯಲ್ಲಿ ಭಾರತೀಯ ವೈಮಾನಿಕ ಕಾವಲು ಹಾರಾಟ ಆರಂಭಿಸಿವೆ.
ಚೀನಾ ಕಿರಿಕ್ಗೆ ಏನು ಕಾರಣ?:ಯಾಂಗ್ತ್ಸೆ ಸಮೀಪ ಪ್ರವಾಸೋದ್ಯಮ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಭಾರತ ಒತ್ತು ಕೊಟ್ಟಿರುವುದು ಚೀನಾ ಕಣ್ಣುಕಿಸುರಿಗೆ ಕಾರಣವಾಗಿ ಅತಿಕ್ರಮಣಕ್ಕೆ ಮುಂದಾಗಿರಬಹುದು ಎನ್ನಲಾಗಿದೆ. ಅರುಣಾಚಲ ಪ್ರದೇಶ ಮತ್ತು ಟಿಬೆಟ್ ಪವಿತ್ರ ಸ್ಥಳದ ಅಭಿವೃದ್ಧಿ ಕೂಡ ಚೀನಿ ಕೃತ್ಯಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ. ಸಮುದ್ರ ಮಟ್ಟದಿಂದ 17 ಸಾವಿರ ಅಡಿ ಎತ್ತರ ಇರುವ ಯಾಂಗ್ತ್ಸೆಯಲ್ಲಿ ಡಿ.9ರಂದು ಚೀನಾದ 300ಕ್ಕೂ ಹೆಚ್ಚು ಯೋಧರು ಸರಹದ್ದು ದಾಟಲು ಯತ್ನಿಸಿದ್ದರು. ಆದರೆ ತಮ್ಮವರು ಏನೂ ಮಾಡಿಲ್ಲ. ಭಾರತದ ಯೋಧರೇ ಗಡಿ ದಾಟಲು ಮುಂದಾಗಿದ್ದರು ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಹೇಳಿದ್ದಾರೆ.