ಮುಂಬೈ: 'ಭಾರತದ ಅಭಿವೃದ್ಧಿಯು ಇಲ್ಲಿನ ಜನರ ದೃಷ್ಟಿಕೋನ ಮತ್ತು ಅವರ ಆಕಾಂಕ್ಷೆಗಳನ್ನು ಅವಲಂಬಿಸಿದೆ' ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಸೋಮವಾರ ಹೇಳಿದ್ದಾರೆ.
ಮುಂಬೈನಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 'ಭಾರತವು ಅಮೆರಿಕ ಅಥವಾ ಚೀನಾವನ್ನು ನೋಡಿ ಅಭಿವೃದ್ಧಿಯಾಗಬೇಕು ಎನ್ನುವುದು ದೇಶದ ಅಭಿವೃದ್ಧಿಯಲ್ಲ.
ಹಾಗೆ ಅಭಿವೃದ್ಧಿ ಹೊಂದಿದರೆ ಅದು ಚೀನಾ ಮತ್ತು ಅಮೆರಿಕದಂತೆ ಆಗುತ್ತದೆ. ಭಾರತದ ಅಭಿವೃದ್ಧಿಯು ಇಲ್ಲಿನ ಜನರ ಪರಿಸ್ಥಿತಿ ಮತ್ತು ಆಕಾಂಕ್ಷೆಗಳ ಮೇಲೆ ಅವಲಂಬಿತವಾಗಿದ್ದು, ನಮ್ಮ ಸಂಸ್ಕೃತಿ ಮತ್ತು ಪ್ರಪಂಚದ ಕಡೆಗೆ ನಮ್ಮ ದೃಷ್ಟಿಕೋನವನ್ನು ಆಧರಿಸಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
'ಮನುಷ್ಯನನ್ನು ಸಮೃದ್ಧಿಯನ್ನಾಗಿಸುವ, ಆದರೆ ಪ್ರಕೃತಿಯನ್ನು ನಾಶಮಾಡುವ ಧರ್ಮವು ಧರ್ಮವಲ್ಲ. ಭಾರತವು ಬಲಶಾಲಿಯಾದರೆ ನಾವು ಚೀನಾ ಅಥವಾ ಅಮೆರಿಕದಂತೆ 'ದಂಡ' ಪ್ರಯೋಗಿಸುವುದಿಲ್ಲ. ಭಾರತದ ಅಭಿವೃದ್ಧಿಯ ಮಾದರಿಯು ತನ್ನನ್ನು ತಾನು ಅಭಿವೃದ್ಧಿಪಡಿಸಿ ಕೊಳ್ಳುವುದಾಗಿದೆ ಹಾಗೂ ಇತರ ದೇಶಗಳು ಪರಸ್ಪರ ಹೋರಾಟ ಮಾಡಲು ಅವಕಾಶ ನೀಡುವುದಿಲ್ಲ. ಭಾರತದ ಪ್ರಗತಿ ಎಂದರೆ ಇಡೀ ಜಗತ್ತಿನ ಪ್ರಗತಿ' ಎಂದೂ ಅವರು ಹೇಳಿದ್ದಾರೆ.
'ಈಗ ನಮಗೆ ಜಿ-20 ಅಧ್ಯಕ್ಷ ಸ್ಥಾನದ ಆತಿಥ್ಯ ವಹಿಸಿಕೊಳ್ಳುವಂತೆ ಕೇಳಲಾಗಿದೆ. ನಾವು ರಷ್ಯಾಕ್ಕೆ ಉಕ್ರೇನ್‌ನೊಂದಿಗೆ ಯುದ್ಧ ಮುಂದುವರಿಸಬೇಡಿ ಎಂದು ಹೇಳುತ್ತಿದ್ದೇವೆ. ಅದೀಗ ಭಾರತವು ಉತ್ತಮ ದೇಶವೆಂದು ಹೇಳುತ್ತಿದೆ. ಇದೇ ಮಾತನ್ನು ನಾವು ಈ ಹಿಂದೆ ಹೇಳಿದ್ದರೆ, ರಷ್ಯಾ ನಮ್ಮ ಬಾಯಿ ಮುಚ್ಚಿಸುತ್ತಿತ್ತು. ಇದು ಭಾರತವು ಬೆಳೆಯುತ್ತಿದೆ ಹಾಗೂ ಭಾರತೀಯರ ಖ್ಯಾತಿಯು ಬೆಳೆಯುತ್ತಿರುವುದನ್ನು ತೋರಿಸುತ್ತದೆ' ಎಂದರು.