ನವದೆಹಲಿ: 'ಪಾಕಿಸ್ತಾನದ ವಿರುದ್ಧ 1971ರಲ್ಲಿ ಭಾರತವು ನಡೆಸಿದ ಯುದ್ಧವು ಅಮಾನವೀಯತೆ ಮೇಲಿನ ಮಾನವೀಯತೆಯ ಮತ್ತು ಅನ್ಯಾಯದ ಮೇಲಿನ ನ್ಯಾಯದ ವಿಜಯವಾಗಿದೆ. ಬಾಂಗ್ಲಾದೇಶದ ಜನ್ಮಕ್ಕೆ ಕಾರಣವಾದ ಈ ಯುದ್ಧದಲ್ಲಿ ಭಾರತವು ನಿರ್ಣಾಯಕ ವಿಜಯ ಸಾಧಿಸಿತು' ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಶುಕ್ರವಾರ ಹೇಳಿದ್ದಾರೆ.
'ಇಂದು ವಿಜಯ್ ದಿವಸ್. ಭಾರತದ ಸಶಸ್ತ್ರ ಪಡೆಗಳ ಆದರ್ಶಮಯ, ಅಪ್ರತಿಮ ಧೈರ್ಯ, ಸಾಹಸ ಮತ್ತು ತ್ಯಾಗವನ್ನು ರಾಷ್ಟ್ರವು ಗೌರವಿಸುತ್ತದೆ. 1971ರ ಯುದ್ಧದ ವಿಜಯಕ್ಕಾಗಿ ಭಾರತವು ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆ ಪಡುತ್ತದೆ' ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.
ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್. ಜೈಶಂಕರ್ ಅವರ ತಮ್ಮ ಟ್ವೀಟ್‌ನಲ್ಲಿ ಸಶಸ್ತ್ರ ಪಡೆಗಳಿಗೆ ಗೌರವ ವಂದನೆ ಸಲ್ಲಿಸಿ, 'ನಮ್ಮ ವೀರ ಭಾರತೀಯ ಸಶಸ್ತ್ರ ಪಡೆಗಳ ಸೇವೆ ಮತ್ತು ತ್ಯಾಗಕ್ಕೆ ನಾವು ಯಾವಾಗಲೂ ಕೃತಜ್ಞರಾಗಿರುತ್ತೇವೆ' ಎಂದಿದ್ದಾರೆ.
ಸೇನಾ ಪಡೆ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು 'ವಿಜಯ್ ದಿವಸ್'ನ ಮುನ್ನಾ ದಿನದಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರರು ಭಾಗವಹಿಸಿದ್ದರು.
ಸಶಸ್ತ್ರ ಪಡೆಗಳಿಗೆ ಋಣಿ: ಮೋದಿ ಟ್ವೀಟ್
ದೇಶವನ್ನು ಸುರಕ್ಷಿತವಾಗಿಡುವಲ್ಲಿ ಸಶಸ್ತ್ರ ಪಡೆಗಳು ವಹಿಸಿದ ಪಾತ್ರಕ್ಕಾಗಿ ದೇಶವು ಅವರಿಗೆ ಸದಾ ಋಣಿಯಾಗಿರುತ್ತದೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ.
'ವಿಜಯ್ ದಿವಸ್'ದ ನಿಮಿತ್ತ ಟ್ವೀಟ್ ಮಾಡಿರುವ ಮೋದಿ ಅವರು, '1971ರ ಯುದ್ಧದಲ್ಲಿ ಭಾರತವು ಅಸಾಧಾರಣ ಗೆಲುವು ಸಾಧಿಸಲು ಕಾರಣರಾದ ಎಲ್ಲ ವೀರ ಸೇನಾ ಸಿಬ್ಬಂದಿಗೆ ವಿಜಯ್ ದಿವಸ್‌ನಂದು ನಾನು ಗೌರವ ಸಲ್ಲಿಸುತ್ತೇನೆ' ಎಂದು ಹೇಳಿದ್ದಾರೆ.
ರಾಷ್ಟ್ರಪತಿ ಟ್ವೀಟ್: '1971ರ ಯುದ್ಧದ ಸಮಯದಲ್ಲಿ ದೇಶದ ಸಶಸ್ತ್ರ ಪಡೆಗಳು ಪ್ರದರ್ಶಿಸಿದ ಅಸಾಧಾರಣ ಶೌರ್ಯವನ್ನು ರಾಷ್ಟ್ರವು ಕೃತಜ್ಞತೆಯಿಂದ ಸ್ಮರಿಸುತ್ತದೆ ಮತ್ತು ಪಡೆಗಳ ಅಪ್ರತಿಮ ಧೈರ್ಯ ಮತ್ತು ತ್ಯಾಗದ ಕಥೆಗಳು ಪ್ರತಿಯೊಬ್ಬ ಭಾರತೀಯನನ್ನು ಪ್ರೇರೇಪಿಸುತ್ತಲೇ ಇವೆ' ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್ ಮಾಡಿದ್ದಾರೆ.
'ವೀರಯೋಧರಿಗೆ ನಮನ ಸಲ್ಲಿಸಿ'
'ವಿಜಯ್ ದಿವಸ್' ನಿಮಿತ್ತ ಇಂಡಿಯಾ ಗೇಟ್ ಬಳಿ ಇರುವ ಯುದ್ಧ ಸ್ಮಾರಕಕ್ಕೆ ಕೇಂದ್ರ ಎಲೆಕ್ಟ್ರಾನಿಕ್ಸ್, ಐಟಿ, ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಶಸ್ತ್ರ ಪಡೆಗಳ ಸಾಹಸವನ್ನು ಸ್ಮರಿಸಿದ ರಾಜೀವ್, 'ಸಾರ್ವಜನಿಕರು ಬಿಡುವು ಮಾಡಿಕೊಂಡು ಇಂಡಿಯಾ ಗೇಟ್ ಬಳಿಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, ಅಗಲಿದ ಧೈರ್ಯಶಾಲಿ ಯೋಧರಿಗೆ ಗೌರವ ಸಲ್ಲಿಸಬೇಕು' ಎಂದು ವಿನಂತಿಸಿದರು.
ಬಾಂಗ್ಲಾದೇಶವನ್ನು ಸಾರ್ವಭೌಮ ರಾಷ್ಟ್ರವನ್ನಾಗಿಸಲು ಕಾರಣವಾದ 1971ರ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಭಾರತವು ಜಯಗಳಿಸಿದ ನೆನಪಿಗಾಗಿ ಪ್ರತಿ ವರ್ಷ ಡಿ. 16ರಂದು 'ವಿಜಯ್ ದಿವಸ್' ಆಚರಿಸಲಾಗುತ್ತದೆ. ಯುದ್ಧದಲ್ಲಿ ಭಾರತೀಯ ಹಾಗೂ ಬಾಂಗ್ಲಾ ದೇಶದ ಸೇನೆಗಳಿಗೆ ಸುಮಾರು 93 ಸಾವಿರ ಪಾಕಿಸ್ತಾನಿ ಸೈನಿಕರು ಶರಣಾಗಿದ್ದರು.