ಚೆನ್ನೈ: ಖ್ಯಾತ ತಮಿಳು ನಿರ್ದೇಶಕ ವೆಟ್ರಿಮಾರನ್ (Vetrimaaran) ಅವರ ನೂತನ ಚಿತ್ರ 'ವಿಡುದಲೈ' (Viduthalai) ಚಿತ್ರೀಕರಣದಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಸಾಹಸ ಕಲಾವಿದ ಎಸ್. ಸುರೇಶ್ ನಿಧನರಾಗಿದ್ದಾರೆ. ಶನಿವಾರದಂದು (ಡಿಸೆಂಬರ್ 3) ನಡೆಯುತ್ತಿದ್ದ 'ವಿಡುದಲೈ' ಚಿತ್ರೀಕರಣದ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳಿದ್ದೂ ಅಪಘಾತಕ್ಕೀಡಾಗಿದ್ದ ಸಾಹಸ ಕಲಾವಿದ ಎಸ್. ಸುರೇಶ್ ಭಾನುವಾರ ಮುಂಜಾನೆ ನಿಧನರಾಗಿದ್ದಾರೆ ಎಂಬ ಸಂಗತಿಯನ್ನು ದಕ್ಷಿಣ ಭಾರತೀಯ ಸಿನಿಮಾ ಮತ್ತು ಟಿವಿ ಸಾಹಸ ಕಲಾವಿದರ ಒಕ್ಕೂಟದ ಅಧ್ಯಕ್ಷ ತವಸಿ ರಾಜ್ ದೃಢಪಡಿಸಿದ್ದಾರೆ ಎಂದು thenewsminute.com ವರದಿ ಮಾಡಿದೆ. ಸುರೇಶ್ ತಮ್ಮ ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
'ಅವರು ಜಿಗಿಯುವ ಸಾಹಸವನ್ನು ಮಾಡುವಾಗ ಅಪಘಾತ ಸಂಭವಿಸಿದೆ. ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರೂ ಅಪಘಾತ ಸಂಭವಿಸಿರುವುದು ದುರದೃಷ್ಟಕರವಾಗಿದೆ. ನಾವು ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ದರೂ ಕೊನೆಯುಸಿರೆಳೆದರು. ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕರು ನಾವು ಈ ಕುರಿತು ತಮ್ಮ ಕೈಲಾದಷ್ಟು ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ನಮ್ಮ ಒಕ್ಕೂಟದಿಂದಲೂ ಕೈಲಾದಷ್ಟು ನೆರವು ನೀಡಲು ಪ್ರಯತ್ನಿಸುತ್ತೇವೆ' ಎಂದು ತವಸಿ ರಾಜ್ ತಿಳಿಸಿದ್ದಾರೆ.
ತಮ್ಮ 'ವಡಾ ಚೆನ್ನೈ' ಹಾಗೂ 'ಅಸುರನ್' ಚಿತ್ರಗಳಿಂದ ಖ್ಯಾತರಾಗಿರುವ ನಿರ್ದೇಶಕ ವೆಟ್ರಿಮಾರನ್, ಸುರೇಶ್ ಸಾವಿನ ಕುರಿತು ಇನ್ನು ಅಧಿಕೃತ ಹೇಳಿಕೆ ನೀಡಬೇಕಿದೆ. ಹಾಸ್ಯ ಪಾತ್ರಗಳ ಮೂಲಕ ಮನೆಮಾತಾಗಿರುವ ಸೂರಿ 'ವಿಡುದಲೈ' ಚಿತ್ರದ ನಾಯಕ ನಟರಾಗಿ ನಟಿಸುತ್ತಿದ್ದಾರೆ. ಈ ಚಿತ್ರ ಪೊಲೀಸ್ ವ್ಯವಸ್ಥೆ ಕುರಿತಂತೆ ಇದೆ. ಈ ಚಿತ್ರದಲ್ಲಿ ಸಾಮಾಜಿಕ-ರಾಜಕೀಯದ ಹಲವಾರು ಒಳಸುಳಿಗಳನ್ನು ಅನಾವರಣಗೊಳಿಸಲಾಗಿದೆ ಎಂದು ಹೇಳಲಾಗಿದೆ.'
ಚಿತ್ರದಲ್ಲಿ ವಿಜಯ್ ಸೇತುಪತಿ ಹಾಗೂ ಗೌತಮ್ ವಾಸುದೇವ್ ಮೆನನ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಚಿತ್ರಕ್ಕೆ ಸಂಗೀತ ಒದಗಿಸಿದ್ದು, ಉದಯನಿಧಿ ಸ್ಟಾಲಿನ್ ಅವರ ರೆಡ್ ಜೇಂಟ್ ಪಿಕ್ಚರ್ಸ್ ಚಿತ್ರವನ್ನು ನಿರ್ಮಿಸಿದೆ. ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕಳೆದ ವರ್ಷದ ಏಪ್ರಿಲ್ ನಲ್ಲಿ ಬಿಡುಗಡೆಯಾಗಿತ್ತು.