ನವದೆಹಲಿ: ಜನವರಿಯಿಂದ ಹಲವು ಆರ್ಥಿಕ ನಿಯಮಗಳಲ್ಲಿ ಬದಲಾವಣೆ ಆಗಲಿದೆ. ಬ್ಯಾಂಕ್ ಲಾಕರ್ ಒಪ್ಪಂದ ನಿಯಮ ಬದಲಾವಣೆ, ಎನ್ಪಿಎಸ್ ಚಂದಾದಾರರಿಗೆ ಕೋವಿಡ್ ಸಾಂಕ್ರಾಮಿಕದ ವೇಳೆ ನೀಡಲಾಗಿದ್ದ ಭಾಗಶಃ ಹಣ ಹಿಂಪಡೆಯುವ ನಿಯಮ ರದ್ದು ಸೇರಿ ಆರ್ಥಿಕತೆ ಸಂಬಂಧಿಸಿದ ಕೆಲವು ಬದಲಾವಣೆಗಳು ಆಗಲಿವೆ.
ಬ್ಯಾಂಕ್ ಲಾಕರ್ ನಿಯಮ ಪರಿಷ್ಕರಣೆ
ಬ್ಯಾಂಕ್ಗಳಲ್ಲಿ ಗ್ರಾಹಕರು ಪಡೆಯುವ ಸೇಫ್ ಲಾಕರ್ ಒಪ್ಪಂದದ ನಿಯವನ್ನು ಪರಿಷ್ಕರಿಸಲಾಗಿದ್ದು, ಹೊಸ ನಿಯಮವು ಜ.1ರಿಂದ ಜಾರಿಗೆ ಬರಲಿದೆ. ಹೀಗಾಗಿ ಬ್ಯಾಂಕ್ಗಳು ನವೀಕೃತ ಒಪ್ಪಂದಕ್ಕೆ ಸಹಿ ಹಾಕುವಂತೆ ಎಸ್ಎಂಎಸ್ ಅನ್ನು ಸೇಫ್ ಲಾಕರ್ ಹೊಂದಿರುವ ಗ್ರಾಹಕರಿಗೆ ಕಳುಹಿಸುತ್ತಿದೆ. 2021ರ ಆಗಸ್ಟ್ನಲ್ಲಿ ಬ್ಯಾಂಕ್ ಸೇವ್ ಲಾಕರ್ ಕುರಿತ ನಿಯಮವನ್ನು ಬಿಗಿಗೊಳಿಸುವಂತೆ ಸುಪ್ರೀಂಕೋರ್ಟ್ ಆರ್ಬಿಐಗೆ ಸೂಚಿಸಿತ್ತು.
ತೆರಿಗೆ ವಿನಾಯಿತಿಗೆ ಹೂಡಿಕೆ ಘೋಷಣೆ
ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯಲು ಬಯಸುವ ತೆರಿಗೆದಾರರು ಹೂಡಿಕೆ ಕುರಿತ ಘೋಷಣೆಯನ್ನು ಸಂಬಂಧಿಸಿದ ಹೂಡಿಕೆಗಳ ರಸೀದಿಯೊಂದಿಗೆ ಸಲ್ಲಿಸಬೇಕು. ಈ ಘೋಷಣೆಯನ್ನು ಮಾರ್ಚ್ವರೆಗೂ ಸಲ್ಲಿಸಬಹುದಾಗಿದ್ದರೂ ಜನವರಿಯಲ್ಲೇ ಈ ಪ್ರಕ್ರಿಯೆ ಮುಗಿಸಿಕೊಂಡರೆ ಕ್ಷೇಮ.
ವಿಮೆಗೆ ಕೆವೈಸಿ ಕಡ್ಡಾಯ
ಹೊಸ ವರ್ಷದಲ್ಲಿ ಖರೀದಿಸುವ ಆರೋಗ್ಯ, ವಾಹನ, ಪ್ರವಾಸ, ಗೃಹ ವಿಮೆಗಳಿಗೆ ಕೆವೈಸಿ (ನೋ ಯುವರ್ ಕಸ್ಟಮರ್) ಕಡ್ಡಾಯ ಎಂದು ಭಾರತೀಯ ವಿಮಾ ಅಭಿವೃದ್ಧಿ ಮತ್ತು ನಿಯಂತ್ರಣ ಪ್ರಾಧಿಕಾರ (ಐಆರ್ಡಿಎಐ) ತಿಳಿಸಿದೆ. ಹೊಸದಾಗಿ ಖರೀದಿಸುವ ಈ ವಿಮೆಗಳ ಕಂತಿನ ಮೊತ್ತವನ್ನು ಲೆಕ್ಕಿಸದೆ ಕೆವೈಸಿ ಅರ್ಜಿಯನ್ನು ಗ್ರಾಹಕರು ಭರ್ತಿ ಮಾಡಬೇಕು. ಪ್ರಸ್ತುತದ ನಿಯಮದ ಪ್ರಕಾರ, ಜೀವವಿಮೆ ಖರೀದಿಗೆ ಮಾತ್ರ ಕೆವೈಸಿ ನೀಡುವುದು ಕಡ್ಡಾಯವಾಗಿದೆ. ಈಗ ಅದನ್ನು ಇನ್ನಿತರ ವಿಷಯವಾರು ವಿಮೆಗೂ ವಿಸ್ತರಿಸಲಾಗಿದೆ.
ಪಾಸ್ಬುಕ್ ಪ್ರತಿ ಪುರಾವೆ ಅಲ್ಲ
ಮ್ಯೂಚುವಲ್ ಫಂಡ್ನಲ್ಲಿನ ಹೂಡಿಕೆಗೆ ಬ್ಯಾಂಕ್ ಪಾಸ್ಬುಕ್ ಗುರುತಿನ ಪುರಾವೆ ಎಂದು ಪರಿಗಣಿಸುವುದಿಲ್ಲ. ಆಧಾರ್, ಮತದಾರರ ಗುರುತಿನ ಚೀಟಿ, ವಾಹನ ಚಾಲನಾ ಪರವಾನಗಿ ಈ ರೀತಿಯ ಪುರಾವೆಗಳನ್ನು ಒದಗಿಸಬೇಕು.
ಎನ್ಪಿಎಸ್ ಭಾಗಶಃ ಹಿಂಪಡೆತ ಅಲಭ್ಯ
ಕೋವಿಡ್ ಪರಿಸ್ಥಿತಿಯಲ್ಲಿ ಆರ್ಥಿಕ ಸಹಾಯಕ್ಕಾಗಿ ಬದಲು ಮಾಡಲಾಗಿದ್ದ ರಾಷ್ಟ್ರೀಯ ಪಿಂಚಣಿ ಯೋಜನೆಯ (ಎನ್ಪಿಎಸ್) ನಿಯಮವನ್ನು ಸರ್ಕಾರ ಕೈಬಿಟ್ಟಿದೆ. ಇದರಿಂದ ಚಂದಾದಾರರಿಗೆ ಭಾಗಶಃ ಹಣ ಹಿಂಪಡೆಯುವ ಅವಕಾಶ ತಪ್ಪಿದೆ. ಕೋವಿಡ್ ವೇಳೆಯಲ್ಲಿ ಹಣ ಹಂಪಡೆಯಲು ಇಚ್ಛಿಸುವವರು ಸ್ವಯಂ ದೃಢೀಕರಣದ ಮೂಲಕ ಅನ್ಲೈನ್ನಲ್ಲಿ ಅರ್ಜಿ ದಾಖಸಬಹುದಾಗಿತ್ತು. ಬದಲಾದ ಈ ನಿಯಮ ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ಕೇಂದ್ರದ ಸ್ವಾಯತ್ತ ಸಂಸ್ಥೆಗಳ ಎನ್ಪಿಎಸ್ ಚಂದಾದಾರಾದ ನೌಕರರಿಗೆ ಅನ್ವಯ ಆಗಲಿದೆ. ತುರ್ತು ಸಂದರ್ಭದಲ್ಲಿ ಹಣ ಹಿಂಪಡೆಯಲು ಇರುವ ನಿಯಮ ಈ ಹಿಂದಿನಂತೆಯೇ ಇರಲಿದೆ.