ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಹೇಳಿಕೆ ಖಂಡಿಸಿ ಬಿಜೆಪಿ ಶನಿವಾರ ದೇಶಾದ್ಯಂತ ಪ್ರತಿಭಟನೆ ನಡೆಸಿತು.
ನ್ಯೂಯಾರ್ಕ್‌ನಲ್ಲಿ ಬುಧವಾರ ಮತ್ತು ಗುರುವಾರ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ನಿಮ್ಮ ದೇಶ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ಪ್ರಧಾನಿ ಮೋದಿ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸಿದ ಭುಟ್ಟೋ, ಭಾರತ ಎರಡೂ ದೇಶಗಳಲ್ಲಿನ ಮುಸ್ಲಿಮರನ್ನು ಭಯೋತ್ಪಾದಕರೊಂದಿಗೆ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು. ಅಲ್ಲದೆ "ಒಸಾಮಾ ಬಿನ್ ಲಾಡೆನ್ ಸತ್ತಿದ್ದಾನೆ. ಆದರೆ ಗುಜರಾತ್‌ನ ಕಟುಕ ಇನ್ನೂ ಬದುಕಿದ್ದಾನೆ ಮತ್ತು ಆತ ಭಾರತದ ಪ್ರಧಾನ ಮಂತ್ರಿ" ಎಂದಿದ್ದರು.
ಬಿಲಾವಲ್ ಭುಟ್ಟೋ ಅವರ ಹೇಳಿಕೆ ಖಂಡಿ ಬಿಜೆಪಿ ಕಾರ್ಯಕರ್ತರು ಇಂದು ದೇಶಾದ್ಯಂತ ಪ್ರತಿಭಟನೆ ನಡೆಸಿದರು. ಉತ್ತರ ಪ್ರದೇಶದ ಲಖನೌನಲ್ಲಿ ಭುಟ್ಟೋ ಪ್ರತಿಕೃತಿ ದಹಿಸಿ ಬಿಜೆಪಿ ಕಚೇರಿಯಿಂದ ಅಟಲ್ ಚೌಕ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮಥುರಾದಲ್ಲೂ ಬಿಜೆಪಿ ಕಾರ್ಯಕರ್ತರು ಭುಟ್ಟೋ ವಿರುದ್ಧ ಪ್ರತಿಭಟನೆ ನಡೆಸಿದರು ಮತ್ತು ಪ್ರತಿಕೃತಿಯನ್ನು ದಹಿಸಿದರು.
ಗುಜರಾತ್ ನ ರಾಜ್‌ಕೋಟ್, ವಡೋದರಾ, ಗಾಂಧಿನಗರ, ಬೊಟಾಡ್, ಮಹಿಸಾಗರ್, ಜುನಾಗಢ್ ಸೇರಿದಂತೆ ಹಲವು ಕಡೆ ಪ್ರತಿಭಟನೆಗಳು ನಡೆದಿವೆ. ಬಿಜೆಪಿ ಕಾರ್ಯಕರ್ತರು ಭುಟ್ಟೋ ವಿರುದ್ಧ ಘೋಷಣೆಗಳನ್ನು ಕೂಗಿದರು ಮತ್ತು ಕೆಲವೆಡೆ ಅವರ ಪ್ರತಿಕೃತಿ ದಹಿಸಿದರು.
ಮಹಾರಾಷ್ಟ್ರ, ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶದ ಹಲವು ಕಡೆ ಬಿಜೆಪಿ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು.
ಪುಣೆ ಮತ್ತು ಮುಂಬೈನಲ್ಲಿ ಏಕಕಾಲದಲ್ಲಿ ಪ್ರತಿಭಟನೆಗಳು ಪ್ರಾರಂಭವಾದವು, ನೂರಾರು ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ತಮ್ಮ ಕೈಯಲ್ಲಿ ಫಲಕಗಳೊಂದಿಗೆ ಪ್ರಮುಖ ಜಂಕ್ಷನ್‌ಗಳಲ್ಲಿ ಜಮಾಯಿಸಿದ್ದರು. ಪಾಕಿಸ್ತಾನ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವರ ವಿರುದ್ಧ ಘೋಷಣೆಗಳನ್ನು ಕೂಗುತ್ತಅವರ ಪ್ರತಿಕೃತಿಗಳನ್ನು ಸುಟ್ಟು ಹಾಕಿದರು.