HEALTH TIPS

ವರ್ಷದ ಮೆಲುಕು, ಭರವಸೆಯೇ ಬದುಕು

 

              ಮತ್ತೊಂದು ನೂತನ ವರ್ಷಕ್ಕೆ ಪದಾರ್ಪಣೆ ಮಾಡುತ್ತಿ ದ್ದೇವೆ. ಹೊಸ ವರ್ಷವನ್ನು ಬರಮಾಡಿಕೊಳ್ಳುವುದು ಎಂದರೆ, ಸವೆದ ವರ್ಷದತ್ತ ತಿರುಗಿ ನೋಡುವುದು, ಸೋಲು, ದುಃಖ, ಆತಂಕದ ಮೂಟೆ ಒಗೆದು, ಒಳಿತಿನ ಭರವಸೆಯೊಂದಿಗೆ ಭವಿಷ್ಯದೆಡೆಗೆ ಹೆಜ್ಜೆ ಹಾಕುವುದು.
ಈ ಹನ್ನೆರಡು ತಿಂಗಳ ಅವಧಿಯಲ್ಲಿ ಜಗತ್ತು ಪ್ರಮುಖ ಘಟನಾವಳಿಗಳಿಗೆ ಸಾಕ್ಷಿಯಾಯಿತು.

ಈ ಪೈಕಿ ಕೆಲವು ವಿದ್ಯಮಾನಗಳು ಭಾರತವನ್ನು ಪರೋಕ್ಷವಾಗಿ ಬಾಧಿಸಿ ದವು. ವಿದೇಶಾಂಗ ನೀತಿಯ ದೃಷ್ಟಿಯಿಂದ ಭಾರತ ಆತ್ಮವಿಶ್ವಾಸದ ಹೆಜ್ಜೆಗಳನ್ನು ಇರಿಸಿತು. ನಮ್ಮ ನೆರೆಯ ರಾಷ್ಟ್ರಗಳಲ್ಲಾದ ಬೆಳವಣಿಗೆಗಳು ಎಚ್ಚರಿಕೆಯ ಸಂದೇಶ ವನ್ನು ರವಾನಿಸಿದವು.

                     2022, ಒಂದು ಬಗೆಯ ಸಂಭ್ರಮ ಮತ್ತು ನಿರಾಳ ಭಾವದೊಂದಿಗೆ ಆರಂಭವಾಯಿತು. ಜಗತ್ತಿನಾದ್ಯಂತ ಆರೋಗ್ಯ ಮತ್ತು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದ್ದ ಕೊರೊನಾ ವೈರಾಣುವಿನ ಹರಡುವಿಕೆಯು‌ ವೇಗ ಕಳೆದು ಕೊಂಡಿತ್ತು. ನಾಲ್ಕಾರು ಲಸಿಕೆಗಳು ಆಸರೆಗೆ ಒದಗಿದ್ದವು. ಹೊಸ ಉತ್ಸಾಹದೊಂದಿಗೆ ಬದುಕು ಕಟ್ಟಿಕೊಳ್ಳಲು ಜನ ಮುಂದಡಿಯಿಟ್ಟರು. ಆದರೆ ಫೆಬ್ರುವರಿ 24ರಂದು ಆರಂಭವಾದ ಉಕ್ರೇನ್ ಮತ್ತು ರಷ್ಯಾ ನಡುವಿನ ಕದನ ಮತ್ತೊಮ್ಮೆ ಜಗತ್ತನ್ನು ಆತಂಕಕ್ಕೆ ದೂಡಿತು.

                 ಉಕ್ರೇನ್ ಜನ ಊರು ತೊರೆದು ಯುರೋಪಿನ ಇತರ ರಾಷ್ಟ್ರಗಳತ್ತ ವಲಸೆ ಹೊರಟರು. ನಿರಾಶ್ರಿತ ತಾಣಗಳಲ್ಲಿ ಏದುಸಿರುಬಿಟ್ಟರು. ಯುದ್ಧಪೀಡಿತ ಪ್ರದೇಶಗಳಿಂದತಮ್ಮ ದೇಶದ ನಾಗರಿಕರನ್ನು ಸುರಕ್ಷಿತವಾಗಿ ವಾಪಸು ಕರೆಸಿಕೊಳ್ಳುವುದು ಇತರ ದೇಶಗಳಿಗೆ ಸವಾಲೆನಿಸಿತು. ಉಕ್ರೇನ್ ಯುದ್ಧದಿಂದಾಗಿ ಜಾಗತಿಕ ಪೂರೈಕೆ ಜಾಲದಲ್ಲಿ ವ್ಯತ್ಯಯ ಉಂಟಾಯಿತು. ಇಂಧನದ ಬೆಲೆ ಹೆಚ್ಚಿತು. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಜಿಗಿಯಿತು. ಎರಡು ದೇಶಗಳ ನಡುವಿನ ಒಂದು ಯುದ್ಧ ಇತರ ದೇಶಗಳ ಆರ್ಥಿಕತೆಗೆ ಪರೋಕ್ಷ ಹೊಡೆತ ನೀಡಿತು.

                 ಉಕ್ರೇನ್ ಯುದ್ಧದ ವಿಷಯದಲ್ಲಿ ಭಾರತದ ನಿಲುವು ಸ್ಪಷ್ಟವಿತ್ತು. ಇದು, ಎರಡು ದೇಶಗಳ ನಡುವಿನ ಯುದ್ಧ, ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂಬುದು ಭಾರತದ ನಿಲುವಾಯಿತು. ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಮತ್ತು ಭದ್ರತಾ ಮಂಡಳಿ ಸಭೆಯಲ್ಲಿ ಉಕ್ರೇನ್ ಯುದ್ಧದ ವಿಷಯ ಪ್ರಸ್ತಾಪವಾದಾಗ ಯಾವ ಒತ್ತಡಕ್ಕೂ ಮಣಿಯದೇ ಕೇವಲ ತನ್ನ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಭಾರತ ಪ್ರತಿಕ್ರಿಯಿಸಿತು. ಆದರೆ ರಷ್ಯಾದ ಅಧ್ಯಕ್ಷ ಪುಟಿನ್ ಅವರನ್ನು ಭೇಟಿಯಾದಾಗ, ಪ್ರಧಾನಿ ಮೋದಿ 'ಇದು ಯುದ್ಧಕ್ಕೆ ಕಾಲವಲ್ಲ' ಎಂದು ನೇರವಾಗಿಯೇ ಹೇಳಿದರು. ಆ ಮಾತನ್ನು ಜಗತ್ತು ಪ್ರಶಂಸಿಸಿತು. ಅದಿರಲಿ, ಇನ್ನು ಎಂಟು ವಾರ ಕಳೆದರೆ ಯುದ್ಧ ಆರಂಭವಾಗಿ ವರ್ಷವಾಗುತ್ತದೆ! ಆದರೆ ಯುದ್ಧ ಹೇಗೆ ಕೊನೆಗೊಂಡೀತು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸ್ಪಷ್ಟವಿಲ್ಲ. ವಿವಿಧ ದೇಶಗಳಲ್ಲಿ ಚದುರಿ ಹೋಗಿರುವ ಉಕ್ರೇನ್ ವಲಸಿಗರ ಬವಣೆಯು 2023ರಲ್ಲಾದರೂ ಕೊನೆಗೊಂಡೀತೇ?

                   ಶ್ರೀಲಂಕಾದ ವಿಷಯ ನೋಡುವುದಾದರೆ, ಆ ದೇಶದ ಇಂದಿನ ಪರಿಸ್ಥಿತಿ ಜಗತ್ತಿಗೆ ಪಾಠ. ಆಳುವವರ ತಪ್ಪು ನಿರ್ಧಾರಗಳು, ಭ್ರಷ್ಟಾಚಾರ, ಮುನ್ನೋಟವಿಲ್ಲದ ವಿತ್ತ ನೀತಿ ಹೇಗೆ ಒಂದು ದೇಶವನ್ನು ದಿವಾಳಿಯತ್ತ ಕೊಂಡೊಯ್ಯಬಹುದು ಎಂಬುದಕ್ಕೆ ಶ್ರೀಲಂಕಾ ತಾಜಾ ಉದಾಹರಣೆ. ಅಲ್ಲಿ ಆದದ್ದಾದರೂ ಇಷ್ಟೇ, ಕೊರೊನಾ ದಿಂದಾಗಿ ಪ್ರವಾಸೋದ್ಯಮಕ್ಕೆ ಹೊಡೆತ ಬಿತ್ತು, ಕಲ್ಯಾಣ ಯೋಜನೆಗಳಿಂದಾಗಿ ಬೊಕ್ಕಸ ಬರಿದಾಯಿತು, ಜನಪ್ರಿಯತೆ ಉಳಿಸಿಕೊಳ್ಳಲು ಅಪ್ರಾಯೋಗಿಕ ತೆರಿಗೆ ನೀತಿಯನ್ನು ಜಾರಿಗೆ ತರಲಾಯಿತು, ಹಿಂದಿರುಗಿಸುವ ಸಾಮರ್ಥ್ಯವನ್ನು ಅಂದಾಜಿಸದೇ, ಚೀನಾದಿಂದ ಸಾಲ ತಂದು ವಿಮಾನ ನಿಲ್ದಾಣಗಳನ್ನು, ಬಂದರುಗಳನ್ನು ನಿರ್ಮಿಸಲಾಯಿತು. ಸಾಲ ಮರುಪಾವತಿಸಲು ವಿದೇಶಿ ವಿನಿಮಯದ ಇಡುಗಂಟು ಬಳಸಬೇಕಾಯಿತು. ಅಂತಿಮ ವಾಗಿ ಜನ ಸಂಕಷ್ಟಕ್ಕೆ ಸಿಲುಕಿದರು. ಕೊನೆಗೆ ಅಧ್ಯಕ್ಷ ಗೊಟಬಯ ರಾಜಪಕ್ಸೆ ದೇಶಬಿಟ್ಟು ಪರಾರಿಯಾಗಬೇಕಾದ ದುಃಸ್ಥಿತಿ ಉದ್ಭವಿಸಿತು. 2023ರಲ್ಲಾದರೂ ಶ್ರೀಲಂಕಾ ಆರ್ಥಿಕ ಶಿಸ್ತು ರೂಢಿಸಿಕೊಂಡೀತೇ, ಪ್ರವಾಸೋದ್ಯಮದ ಆಚೆಗೆ ಬದಲಿ ವರಮಾನದ ಮೂಲ ಹುಡುಕೀತೇ? ಕಾದು ನೋಡಬೇಕು.

                    ಪಾಕಿಸ್ತಾನದ ವಿಷಯ ಭಿನ್ನವಾಗಿಯೇನೂ ಇಲ್ಲ. ಅದು ಕೂಡ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. 'ನವ ಪಾಕಿಸ್ತಾನ' (ನಯಾ ಪಾಕಿಸ್ತಾನ್) ನಿರ್ಮಿಸುವ ಆಶ್ವಾಸನೆಯೊಂದಿಗೆ ಅಧಿಕಾರ ಹಿಡಿದಿದ್ದ ಇಮ್ರಾನ್ ಖಾನ್ ಇದೀಗ ಅವಿಶ್ವಾಸಕ್ಕೆ ಗುರಿಯಾಗಿ ಅಧಿಕಾರ ತ್ಯಜಿಸಿದ್ದಾರೆ. ಶ್ರೀಲಂಕಾದಂತೆಯೇ ಪಾಕಿಸ್ತಾನವೂ ಚೀನಾದ ಸಾಲದ ಸುಳಿಗೆ ಸಿಲುಕಿದೆ. ವಿದೇಶಿ ವಿನಿಮಯ ಸೊರಗುತ್ತಿದೆ. ಐಎಂಎಫ್ ನೀಡಿರುವ ಪಾರುಕಾಣಿಕೆ (Bailout) ಸದ್ಯದ ಮಟ್ಟಿಗೆ ಪಾಕಿಸ್ತಾನವನ್ನು ಹಿಡಿದು ನಿಲ್ಲಿಸಿದೆ.

                  2023ರಲ್ಲಿ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಇಮ್ರಾನ್ ಮುಖ್ಯ ಹುದ್ದೆಗೆ ಬರುತ್ತಾರೋ, ಷರೀಫ್‌ದ್ವಯರು ಅಧಿಕಾರ ಹಿಡಿಯುತ್ತಾರೋ ನೋಡಬೇಕು. ಒಂದೊಮ್ಮೆ ಹಣದುಬ್ಬರ ಮತ್ತು ಆಳುವವರ ಭ್ರಷ್ಟಾಚಾರದಿಂದ ಪಾಕಿಸ್ತಾನದ ಜನ ಬಂಡೆದ್ದರೆ, ಅಂತರ್ಯುದ್ಧ ಆರಂಭವಾಗುವ ಸಾಧ್ಯತೆ ಇಲ್ಲದಿಲ್ಲ. ಒಂದೊಮ್ಮೆ ಅಲ್ಲಿನ ಸೇನೆ ಆಡಳಿತದ ಚುಕ್ಕಾಣಿ ಹಿಡಿದರೆ, ಕದನದ ಕಾರ್ಮೋಡಗಳು ಭಾರತದ ಗಡಿಯುದ್ದಕ್ಕೂ ಆವರಿಸೀತು.

                ಉಳಿದಂತೆ ಚೀನಾ. ಇತ್ತೀಚೆಗಷ್ಟೇ ಚೀನಾದ ಸೈನಿಕರು ಮತ್ತು ಭಾರತ ಸೈನಿಕರ ನಡುವೆ ತವಾಂಗ್ ಪ್ರದೇಶದಲ್ಲಿ ಘರ್ಷಣೆ ನಡೆದಿದೆ. ಆದರೆ ಸದ್ಯೋಭವಿಷ್ಯ ದಲ್ಲಿ ಗಡಿ ವಿಷಯವಾಗಿ ಭಾರತದ ಮೇಲೆ ಚೀನಾ ನೇರವಾಗಿ ಎರಗುವ ದುಸ್ಸಾಹಸಕ್ಕೆ ಕೈ ಹಾಕಲಾರದು. ಅದರ ಗಮನ ಇದೀಗ ತೈವಾನ್ ಮೇಲೆ ಕೇಂದ್ರೀಕೃತಗೊಂಡಂತೆ ಕಾಣುತ್ತಿದೆ. ಆಗಸ್ಟ್ ಮೊದಲ ವಾರ ಅಮೆರಿಕದ ಸಂಸತ್ತಿನ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ತೈವಾನಿಗೆ ಭೇಟಿಕೊಟ್ಟರು. ಈ ಭೇಟಿಯಿಂದ ಚೀನಾ ಕೆರಳಿತು. ತೈವಾನ್ ದ್ವೀಪದ ಸುತ್ತಲೂ ಚೀನಾ ಸಮರಾಭ್ಯಾಸ ನಡೆಸಿ ತನ್ನ ಆಕ್ರೋಶವನ್ನು ಹೊರಹಾಕಿತು. ಆ ಮೂಲಕ ತೈವಾನ್ ವಶಪಡಿಸಿಕೊಳ್ಳಲು ತಾನು ಬದ್ಧ ಎಂಬ ಸಂದೇಶ ರವಾನಿಸಿತು. ಅತ್ತ ಅಮೆರಿಕ ಕೂಡ ಸುಮ್ಮನಾಗಲಿಲ್ಲ. ತೈವಾನ್ ವಿಷಯದಲ್ಲಿ ಯಥಾಸ್ಥಿತಿಗೆ ಧಕ್ಕೆಯಾದರೆ ಮಧ್ಯಪ್ರವೇಶಿಸುವುದು ಅನಿವಾರ್ಯವಾದೀತು ಎಂಬ ಹೇಳಿಕೆ ಶ್ವೇತಭವನದಿಂದ ಹೊರಬಿತ್ತು.

                ಹಾಗಾಗಿ, ಇದೀಗ ಅಮೆರಿಕ ಮತ್ತು ಚೀನಾ ನಡುವಿನ ಬಿರುಕು ಹಿರಿದಾಗಿದೆ. ಅತ್ತ ಚೀನಾದ ಆಂತರಿಕ ರಾಜಕೀಯ ವ್ಯವಸ್ಥೆಯಲ್ಲಿ ಮಾವೊ ಅವರ ನಂತರ ಪ್ರಭಾವಿಯಾಗಿ ಷಿ ಜಿನ್‌ಪಿಂಗ್‌ ಹೊರಹೊಮ್ಮಿದ್ದಾರೆ. ಮೂರನೇ ಅವಧಿಗೆ ಅಧಿಕಾರವನ್ನು ವಿಸ್ತರಿಸಿಕೊಂಡಿ ದ್ದಾರೆ. ಸೇನೆಗೆ ಯುದ್ಧ ಸನ್ನದ್ಧಗೊಳ್ಳುವ ಸೂಚನೆ ನೀಡಿರುವುದೂ ವರದಿಯಾಗಿದೆ. 2023 ಮತ್ತೊಂದು ಕದನಕ್ಕೆ ಸಾಕ್ಷಿಯಾಗುತ್ತದೆಯೇ ಬಲ್ಲವರಾರು?

                ಈ ಎಲ್ಲದರ ನಡುವೆ ದೊಡ್ಡ ಹೊಣೆಗಾರಿಕೆಯೊಂದು ಭಾರತದ ಹೆಗಲೇರಿದೆ. ಈ ವರ್ಷ ಜಿ-20 ಒಕ್ಕೂಟದ ಅಧ್ಯಕ್ಷ ಸ್ಥಾನವನ್ನು ಭಾರತ ನಿರ್ವಹಿಸುತ್ತಿದೆ. ಇದರ ಭಾಗವಾಗಿ 200 ಸಭೆಗಳು ದೇಶದ ವಿವಿಧ 50 ನಗರಗಳಲ್ಲಿ ನಡೆಯಲಿವೆ. ಅಂತಿಮವಾಗಿ 2023ರ ಸೆಪ್ಟೆಂಬರ್ ತಿಂಗಳಿನಲ್ಲಿ ಜಿ-20 ರಾಷ್ಟ್ರಗಳ ವಾರ್ಷಿಕ ಶೃಂಗಸಭೆ ದೆಹಲಿಯಲ್ಲಿ ನಡೆಯುತ್ತದೆ. ಈ ಸಭೆಗಳಲ್ಲಿ ಆದ್ಯತೆಯ ಮೇಲೆ ಚರ್ಚೆಯಾಗಬೇಕಾದ ವಿಷಯಗಳನ್ನು ಭಾರತ ಸೂಚಿಸಬಹುದು. ಭಾರತದ ಹಿತಾಸಕ್ತಿಗೆ ಪೂರಕವಾಗಿ ಚರ್ಚೆಯ ದಿಕ್ಕನ್ನು ನಿರ್ದೇಶಿಸುವ ಅವಕಾಶ ಭಾರತಕ್ಕೆ ದೊರೆಯಲಿದೆ.

                ಒಟ್ಟಿನಲ್ಲಿ, ಮುಂದುವರಿದಿರುವ ಉಕ್ರೇನ್ ಯುದ್ಧ, ಜಾಗತಿಕ ಹಣದುಬ್ಬರ, ಆರ್ಥಿಕ ಹಿಂಜರಿಕೆ ಎಂಬ 2022ರ ಬಳುವಳಿಯ ಜೊತೆಗೆ ಕೊರೊನಾ ಸೋಂಕು ಮತ್ತೊಮ್ಮೆ ಮನುಕುಲವನ್ನು ಸಂಕಷ್ಟಕ್ಕೀಡು ಮಾಡೀತೇ ಎಂಬ ಆತಂಕವನ್ನು ಹೆಗಲೇರಿಸಿಕೊಂಡೇ, ನಾವು ಹೊಸ ವರ್ಷವನ್ನು ಬರಮಾಡಿಕೊಳ್ಳಬೇಕಿದೆ. ಅದು ಅನಿವಾರ್ಯ.

               ಆದರೆ ಒಂದಿಷ್ಟು ಹಾರೈಕೆಗಳೂ ಇರಲಿ. ಮನುಷ್ಯನ ಸ್ವಾರ್ಥಕ್ಕೆ ನಿಸರ್ಗ ನಲುಗದಿರಲಿ, ಪ್ರಾಣಿಸಂಕುಲ ಉಳಿಯಲಿ, ಪಕ್ಷಿಗಳು ಉಲಿಯಲಿ, ಮರಗಿಡಗಳು ಸೊಂಪಾಗಿರಲಿ, ಆರೋಗ್ಯ ಬಿಕ್ಕಟ್ಟು ಮನುಕುಲವನ್ನು ಬಾಧಿಸದಿರಲಿ, ದುಡಿಯುವ ಕೈಗಳಿಗೆ ಕೆಲಸ ಸಿಗಲಿ, ಹಿರಿಯ ಜೀವಗಳಿಗೆ ಆಸರೆ ಇರಲಿ, ಕಂದಮ್ಮಗಳು ಅರೆಹೊಟ್ಟೆ ಮಲಗದಿರಲಿ, ಯುದ್ಧದ ಅಂಗಳದಲ್ಲಿ ಶಾಂತಿಯ ಹೂವು ಅರಳಲಿ, ಸೈನಿಕನ ಕುಟುಂಬ ನಿರಾತಂಕವಾಗಿ ನಿದ್ರಿಸಲಿ ಎಂಬ ಶುಭಕಾಮನೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries