ಮುಂಬೈ: ತಮ್ಮ ವಿರುದ್ಧ ಮಹಿಳೆಯೊಬ್ಬರು ದಾಖಲಿಸಿರುವ ಅತ್ಯಾಚಾರ ಪ್ರಕರಣದ ತನಿಖೆಯ ಹೊಣೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಒಪ್ಪಿಸಬೇಕು ಎಂದು ಮಹಾರಾಷ್ಟ ಮುಖ್ಯಮಂತ್ರಿ ಏಕನಾಥ ಶಿಂದೆ ಬಣದ ಶಿವಸೇನಾ ಸಂಸದ ರಾಹುಲ್ ಶೆವಾಲೆ ಅವರು ಭಾನುವಾರ ಒತ್ತಾಯಿಸಿದ್ದಾರೆ.
'ದೂರುದಾರ ಮಹಿಳೆಯು ಪಾಕಿಸ್ತಾನ ಮತ್ತು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅವರೊಡನೆ ನಂಟು ಹೊಂದಿದ್ದಾರೆ' ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ ಶೆವಾಲೆ, ಈ ಕುರಿತು ಎನ್‌ಐಎ ಮೂಲಕ ತನಿಖೆ ನಡೆಸುವಂತೆ ಏಕನಾಥ ಶಿಂದೆ ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರನ್ನು ತಾವು ಆಗ್ರಹಿಸಿರುವುದಾಗಿ ಹೇಳಿದರು.
'ಮಹಿಳೆಯು ನನ್ನ ವಿರುದ್ಧ ಮಾಡಿರುವ ಆರೋಪಗಳೆಲ್ಲವೂ ಆಧಾರರಹಿತ. ಕಳೆದ ಎರಡು ವರ್ಷಗಳಿಂದ ಆ ಮಹಿಳೆ ನಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ನಾನು ಆಕೆಗೆ ಮಾಡಿದ ಸಹಾಯವನ್ನು ದುರುಪಯೋಗಡಿಸಿಕೊಂಡು ನನ್ನ ರಾಜಕೀಯ ಭವಿಷ್ಯವನ್ನು ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ' ಎಂದೂ ಶೆವಾಲೆ ಆರೋಪಿಸಿದರು.
'ದೂರು ನೀಡಿರುವ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸುವಂತೆ ಅಂಧೇರಿಯ ನ್ಯಾಯಾಲಯ ಸೂಚಿಸಿದ್ದು, ತಮ್ಮ ಪತ್ನಿ ಗೋವಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ' ಎಂದರು.
'ಪೊಲೀಸರು ಮಹಿಳೆಯ ಪತ್ತೆಗೆ ಮುಂದಾಗಿದ್ದಾರೆ. ಆಕೆಯನ್ನು ನನ್ನ ವಿರುದ್ಧದ ಗುರಾಣಿಯಾಗಿಕೊಂಡು ಸಾರ್ವಜನಿಕ ವೇದಿಕೆ ಮೇಲೆ ಕರೆತರುತ್ತಿರುವುದು ಗಂಭೀರ ವಿಚಾರ. ಇದರ ಹಿಂದೆ ಯುವಸೇನಾ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಕೈವಾಡ ಇದೆ' ಎಂದು ಶೆವಾಲೆ ಹೇಳಿದರು.