ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿನ ಬಾಕಿಲಪದವು ಸೇತುವೆಗೆ ಭೂಮಾಫಿಯ ವ್ಯಕ್ತಿಗಳು ನಡೆಸಿದ ಅಭಿವೃದ್ಧಿ ವಿರೋಧಿ ಕೃತ್ಯಗಳನ್ನು ತಡೆಗಟ್ಟುವ ಹಾಗೂ ಸುಗಮ ಕಾಮಗಾರಿ ನಿರ್ವಹಣೆಯ ಸಂರಕ್ಷಣೆಗಾಗಿ ಊರ ಫಲಾನುಭವಿ ಹಾಗೂ ಪಂಚಾಯತು ಆಡಳಿತ ಸಮಿತಿ ನೇತೃತ್ವದಲ್ಲಿ ಅಭಿವೃದ್ಧಿ ಕ್ರಿಯಾ ಸಮಿತಿಯನ್ನು ಮಂಗಳವಾರ ಸಂಜೆ ಸೇತುವೆ ನಿರ್ಮಾಣ ಸ್ಥಳದಲ್ಲಿಯೇ ರಚಿಸಲಾಯಿತು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಬಿ.ಎಸ್.ಗಾಂಭೀರ್, ಜಯಶ್ರೀ ಕುಲಾಲ್, ಪಂ.ಸದಸ್ಯರಾದ ಮಹೇಶ್ ಭಟ್, ಆಶಾಲತ ಅವರ ಉಪಸ್ಥಿತಿಯಲ್ಲಿ ಊರಿನ ನೂರಾರು ನಾಗರಿಕರು ಸಭೆ ಸೇರಿ ಕ್ರಿಯಾ ಸಮಿತಿ ರಚಿಸಿದರು.
ನಾಡಿನ ಅಭಿವೃದ್ಧಿಗಾಗಿ ಸೇತುವೆ ನಿರ್ಮಾಣ ಹಾಗೂ ಸಂರಕ್ಷಣೆಗೆ ಸಮಿತಿ ನಿರ್ಧರಿಸಿದೆ. ಈ ಸಂದರ್ಭದಲ್ಲಿ ಸೇತುವೆ ನಿರ್ಮಾಣಕ್ಕೆ ಅಡ್ಡಗಾಲು ಹಾಕಿದ ವ್ಯಕ್ತಿಗಳ ಬಗ್ಗೆ ಬಹಿರಂಗವಾಗಿ ಹೆಸರು ಘೋಷಿಸಿ ನಾಡಿನ ಅಭಿವೃದ್ಧಿಯನ್ನು ಸಹಿಸದೆ ರಾಜಕೀಯ ಮಾಡುವ ಇಂತಹ ಭೂಮಾಫಿಯ ವ್ಯಕ್ತಿಗಳನ್ನು ಸಂಬಂಧಪಟ್ಟ ಪಕ್ಷಗಳು ಹದ್ದುಬಸ್ತಿನಲ್ಲಿಡಬೇಕೆಂದು ಸಭೆಯಲ್ಲಿ ಒಕ್ಕೊರಲ ಅಭಿಪ್ರಾಯ ಮೂಡಿಬಂತು. ವಿವಿಧ ಪಕ್ಷ ಪ್ರಮುಖರಾದ ವಿನೋದ್ ಕುಮಾರ್,ಸಿದ್ದಿಕ್ ಒಳಮುಗೇರ್, ರಾಮಕೃಷ್ಣ ರೈ, ಶಶಿಕಾಂತ್ ಕಲ್ಯಾಟೆ, ಹಮೀದ್ ನಲ್ಕ,ಅಬ್ಬಾಸ್ ನಲ್ಕ, ಸೂರಾಜ್ ಸಾಯ, ರಸಾಕ್ ನಲ್ಕ ಮೊದಲಾದವರು ಭಾಗವಹಿಸಿದ್ದರು. ಸೇತುವೆ ನಿರ್ಮಾಣಕ್ಕಾಗಿ ಸ್ಥಳದಾನಗೈದ ದಿ.ಮದನ ಮೂಲ್ಯ ಹಾಗೂ ಅವರ ಕುಟುಂಬಸ್ಥರನ್ನು ಸಭೆಯು ಅಭಿನಂದಿಸಿತು.