ಹರಿದ್ವಾರ: ಯೋಗ ಗುರು ರಾಮ್‌ದೇವ್‌ರ ಅಸಭ್ಯ ಹಾಗೂ ಅಶ್ಲೀಲ ವ್ಯಂಗ್ಯಚಿತ್ರ ರಚಿಸಿ, ಅವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಿದ ಆರೋಪದಡಿಯಲ್ಲಿ ಡೆಹ್ರಾಡೂನ್ ಮೂಲದ ಇಬ್ಬರು ವ್ಯಂಗ್ಯಚಿತ್ರಕಾರರ ವಿರುದ್ಧ ಉತ್ತರಾಖಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಸಂಬಂಧ ಪತಂಜಲಿ ಯೋಗ ಪೀಠದ ಕಾನೂನು ವಿಭಾಗವು ಕಂಖಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅದರ ಆಧಾರದಲ್ಲಿ ವ್ಯಂಗ್ಯಚಿತ್ರಕಾರರಾದ ಗಜೇಂದ್ರ ರಾವತ್ ಹಾಗೂ ಹೇಮಂತ್ ಮಾಳವಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕಂಖಲ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಮುಕೇಶ್ ಚೌಹಾಣ್ ತಿಳಿಸಿದ್ದಾರೆ.
ಅಸಭ್ಯ ಹಾಗೂ ಅಶ್ಲೀಲ ವ್ಯಂಗ್ಯಚಿತ್ರಗಳನ್ನು ರಚಿಸಿ ಅವುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡುವ ಮೂಲಕ ಈ ಇಬ್ಬರು ವ್ಯಂಗ್ಯಚಿತ್ರಕಾರರು ಯೋಗ ಗುರು ರಾಮ್‌ದೇವ್ ಅವರ ತೇಜೋವಧೆಗೊಳಿಸಿದ್ದಾರೆ ಎಂದು ದೂರು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಅವರ ವಿರುದ್ಧ ಐಪಿಸಿ ಸೆಕ್ಷನ್ 153ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರ ಪತ್ತೆಗಾಗಿ ಶೋಧ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.