ನವದೆಹಲಿ: 'ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 246 ಮಹಿಳಾ ಅಧಿಕಾರಿಗಳಿಗೆ ಬಡ್ತಿ ನೀಡುವ ವಿಚಾರವಾಗಿ ವಿಶೇಷ ಆಯ್ಕೆ ಮಂಡಳಿ ಜೊತೆ ಸಭೆ ನಡೆಸಲಾಗಿದೆ' ಎಂದು ಕೇಂದ್ರ ಸರ್ಕಾರವು ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಹೇಳಿದೆ.
ಸರ್ಕಾರದ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಹಿರಿಯ ವಕೀಲ ಆರ್.ಬಾಲಸುಬ್ರಮಣಿಯನ್, 'ಮಹಿಳಾ ಅಧಿಕಾರಿಗಳ ಬಡ್ತಿ ವಿಚಾರವನ್ನು ವಿಶೇಷ ಆಯ್ಕೆ ಮಂಡಳಿ-3 ಪರಿಗಣನೆಗೆ ತೆಗೆದುಕೊಳ್ಳಲಿದೆ' ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠಕ್ಕೆ ತಿಳಿಸಿದರು.
'ವಿಶೇಷ ಆಯ್ಕೆ ಮಂಡಳಿಯು ಜನವರಿ 23ರ ವೇಳೆಗೆ ಬಡ್ತಿ ವಿಚಾರ ಇತ್ಯರ್ಥಪಡಿಸಲಿದೆ ಎಂದು ಸರ್ಕಾರ ತಿಳಿಸಿದೆ. ಜನವರಿ 24ರ ನಂತರ ಈ ಬಗ್ಗೆ ವಿಚಾರಣೆ ನಡೆಸಲಾಗುತ್ತದೆ. ಪ್ರತಿವಾದಿಗಳು ಈ ಕುರಿತ ಪರಿಷ್ಕೃತ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು' ಎಂದು ಸೂಚಿಸಿದ ನ್ಯಾಯಪೀಠವು ವಿಚಾರಣೆಯನ್ನು ಜನವರಿ 30ಕ್ಕೆ ಮುಂದೂಡಿತು.
ಮುಖ್ಯಸ್ಥ ಹುದ್ದೆಗಳಿಗೆ ಬಡ್ತಿ ನೀಡುವಾಗ ತಮ್ಮ ಬದಲು ತಮಗಿಂತಲೂ ಕಿರಿಯರಾಗಿರುವ ಪುರುಷ ಅಧಿಕಾರಿಗಳನ್ನೇ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ 34 ಮಂದಿ ಮಹಿಳಾ ಅಧಿಕಾರಿಗಳು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು.