ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ನಿಗದಿತ ಅವಧಿಗೂ 6 ದಿನ ಮುನ್ನವೇ ಅಂತ್ಯಗೊಂಡಿದೆ. ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಚೀನಾ ಮತ್ತು ಭಾರತದ ಸೇನೆಯ ಇತ್ತೀಚಿನ ಸಂಘರ್ಷದ ಕುರಿತಂತೆ ವಿಪಕ್ಷಗಳು ಚರ್ಚೆಗೆ ಒತ್ತಾಯಿಸಿದ್ದರಿಂದ ಶುಕ್ರವಾರ ಉಭಯ ಸದನಗಳ ಅಧಿವೇಶನ ಪದೇ ಪದೇ ಮುಂದೂಡಿಕೆಯಾಗಿತ್ತು.
ಅಧಿವೇಶನದ ಅಂತ್ಯದಲ್ಲಿ ಮಾತನಾಡಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಅನುದಾನಕ್ಕಾಗಿ ಪೂರಕ ಬೇಡಿಕೆಗಳು ಮತ್ತು ಕಡಲ್ಗಳ್ಳತನ ವಿರೋಧಿ ಮಸೂದೆ ಸೇರಿದಂತೆ ಏಳು ಮಸೂದೆಗಳನ್ನು ಅಂಗೀಕರಿಸಿದ 13 ದಿನ ನಡೆದ ಸದನದ ಉತ್ಪಾದಕತೆ ಶೇಕಡಾ 97ರಷ್ಟಿತ್ತು ಎಂದು ಹೇಳಿದರು.
ಡಿಸೆಂಬರ್ 7ರಂದು ಆರಂಭವಾಗಿದ್ದ ಸಂಸತ್ತಿನ ಅಧಿವೇಶನ ನಿಗದಿಯಂತೆ ಡಿಸೆಂಬರ್ 29ರವರೆಗೆ ನಡೆಯಯಬೇಕಿತ್ತು. ಹಬ್ಬಗಳ ಋತುವಾಗಿದ್ದರಿಂದ ಅಧಿವೇಶನವನ್ನು ಮೊಟಕುಗೊಳಿಸುವಂತೆ ಉಭಯ ಸದನಗಳ ಸದಸ್ಯರು ಸರ್ಕಾರ ಮತ್ತು ಸಭಾಪತಿಗಳಿಗೆ ಮನವಿ ಮಾಡಿದ್ದರು ಎಂದು ವರದಿ ತಿಳಿಸಿದೆ.
ಎರಡೂ ಸದನಗಳಲ್ಲಿ ತವಾಂಗ್ ಸಂಘರ್ಷದ ಕುರಿತ ಚರ್ಚೆಗೆ ವಿಪಕ್ಷಗಳು ಒತ್ಸಾಯಿಸಿದ್ದವು. ಆದರೆ, ಸಭಾಧ್ಯಕ್ಷರು ಚರ್ಚೆಗೆ ಅವಕಾಶ ನೀಡಿರಲಿಲ್ಲ.
ಡಿಸೆಂಬರ್ 9ರಂದು ಅರುಣಾಚಲಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಚೀನಾ ಯೋಧರು ಹಾಗೂ ಭಾರತದ ಯೋಧರ ನಡುವೆ ಘರ್ಷಣೆ ನಡೆದಿತ್ತು. ಈ ವಿಷಯವನ್ನು ಕೇಂದ್ರ ಸರ್ಕಾರ ಮುಚ್ಚಿಟ್ಟು ರಾಜಕೀಯ ಮಾಡುತ್ತಿದೆ ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು.
ಈ ಕುರಿತಂತೆ, ಉಭಯ ಸದನಗಳಲ್ಲಿ ಹೇಳಿಕೆ ನೀಡಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಅರುಣಾಚಲಪ್ರದೇಶದ ವಾಸ್ತವಿಕ ಗಡಿ ರೇಖೆಯ(ಎಲ್‌ಎಸಿ) ತವಾಂಗ್ ಬಳಿ ಯಥಾಸ್ಥಿತಿ ಬದಲಾವಣೆಗೆ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ(ಪಿಎಲ್‌ಎ) ಪ್ರಯತ್ನಿಸಿತ್ತು. ಆದರೆ, ಭಾರತದ ಸೇನೆ ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ ಎಂದು ಹೇಳಿದ್ದರು.
ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವ ರಾಜನಾಥ್ ಸಿಂಗ್ ಮತ್ತು ಪಿಯೂಷ್ ಗೋಯಲ್ ಅಂತಿಮ ದಿನದ ಅಧಿವೇಶನದಲ್ಲಿ ಹಾಜರಿದ್ದ ಪ್ರಮುಖ ನಾಯಕರಾಗಿದ್ದಾರೆ.