ನವದೆಹಲಿ: 500 ಮತ್ತು 1000 ರೂ.ಗಳ ಹಳೆಯ ನೋಟುಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರದ ಕ್ರಮದ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿವಿಧ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿದ ಸುಪ್ರೀಂ ಕೋರ್ಟ್, "ತೀರ್ಪು ಕಾಯ್ದಿರಿಸಲಾಗಿದೆ" ಎಂದು ಬುಧವಾರ ಹೇಳಿದೆ.
ಸರ್ಕಾರದ ಪರ ಅಟಾರ್ನಿ ಜನರಲ್ ಆರ್ ವೆಂಕಟರಮಣಿ, ಆರ್‌ಬಿಐನ ವಕೀಲರು ಮತ್ತು ಹಿರಿಯ ವಕೀಲರಾದ ಪಿ ಚಿದಂಬರಂ ಹಾಗೂ ಶ್ಯಾಮ್ ದಿವಾನ್ ಸೇರಿದಂತೆ ಅರ್ಜಿದಾರರ ಪರ ವಕೀಲರ ವಾದವನ್ನು ಆಲಿಸಿದ ನ್ಯಾಯಮೂರ್ತಿ ಎಸ್‌ಎ ನಜೀರ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ, ಕೇಂದ್ರದ 2016ರ ನೋಟು ಅಮಾನ್ಯೀಕರಣ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ತೀರ್ಪನ್ನು ಕಾಯ್ದಿರಿಸಿದೆ.
ಇದೇ ವೇಳೆ 1000 ಮತ್ತು 500 ರೂಪಾಯಿ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸಿದ ಸರ್ಕಾರದ 2016 ರ ನಿರ್ಧಾರಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್(RBI) ಗೆ ನಿರ್ದೇಶನ ನೀಡಿದೆ.
ಮುಚ್ಚಿದ ಕವರ್‌ನಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸುವುದಾಗಿ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ಸುಪ್ರೀಂ ಕೋರ್ಟ್ ಗೆ ತಿಳಿಸಿದರು.
2016ರಲ್ಲಿ ನೋಟು ಅಮಾನ್ಯೀಕರಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ 58 ಅರ್ಜಿಗಳನ್ನು ಆರು ವರ್ಷಗಳ ಬಳಿಕ ಕೊನೆಗೂ ವಿಚಾರಣೆ ನಡೆಸಲಾಗಿದೆ.