ನವದೆಹಲಿ: ಸಂರಕ್ಷಿತ ಅರಣ್ಯ ಪ್ರದೇಶದ ನಿರ್ವಹಣೆಯನ್ನು ಉತ್ತಮಗೊಳಿಸುವುದಕ್ಕಾಗಿ ಸಿದ್ಧಪಡಿಸಲಾಗಿರುವ ವನ್ಯಜೀವಿ (ಸಂರಕ್ಷಣೆ) ತಿದ್ದುಪಡಿ ಕಾಯ್ದೆ, 2021 ಅನ್ನು ಗುರುವಾರ ರಾಜ್ಯಸಭೆ ಅಂಗೀಕರಿಸಿದೆ. ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಜಾನುವಾರುಗಳನ್ನು ಮೇಯಿಸಲು ಮತ್ತು ಅರಣ್ಯ ಪ್ರದೇಶದಿಂದ ಕುಡಿಯಲು ಹಾಗೂ ಮನೆಬಳಕೆಗೆ ನೀರು ಪಡೆದುಕೊಳ್ಳಲು ಮಸೂದೆಯಲ್ಲಿ ಅವಕಾಶ ನೀಡಲಾಗಿದೆ.
ರಾಜ್ಯಸಭೆಯಲ್ಲಿ ಈ ಮಸೂದೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಲೋಕಸಭೆಯು ಮುಂಗಾರು ಅಧಿವೇಶನದಲ್ಲಿ ಈ ಮಸೂದೆಯನ್ನು ಅಂಗೀಕರಿಸಿತ್ತು. ಸಂಸದೀಯ ಸಮಿತಿಯು ಈ ಮಸೂದೆಯ ಪರಿಶೀಲನೆ ನಡೆಸಿದೆ. ಈ ಕಾಯ್ದೆಯಲ್ಲಿ 'ಸಂರಕ್ಷಣೆ' ಹಾಗೂ 'ನಿರ್ವಹಣೆ' ಎನ್ನುವ ಎರಡು ಪರಿಕಲ್ಪನೆಗಳನ್ನು ಸೇರಿಸಲಾಗಿದೆ.
ವನ್ಯಜೀವಿ (ಸಂರಕ್ಷಣೆ) ಕಾಯ್ದೆ 1972ರ ಪ್ರಕಾರ ಮಾಡಲಾದ ಸಸ್ಯ ಪ್ರಭೇದ ಹಾಗೂ ಪ್ರಾಣಿಗಳ ಪಟ್ಟಿಯನ್ನು ತರ್ಕಬದ್ಧವಾದ ರೀತಿಯಲ್ಲಿ ಮರುರೂಪಿಸಲು ವನ್ಯಜೀವಿ (ಸಂರಕ್ಷಣೆ) ತಿದ್ದುಪಡಿ ಕಾಯ್ದೆಯಲ್ಲಿ ಅವಕಾಶ ಕೊಡಲಾಗಿದೆ. ಈ ರೀತಿಯ ಪರಿಷ್ಕರಣೆಯು ಸಸ್ಯ ಹಾಗೂ ಪ್ರಾಣಿಗಳ ಸಂರಕ್ಷಣೆಯ ಕಾರ್ಯವನ್ನು ಹೆಚ್ಚು ಪರಿಣಾಮಕಾರಿ ಮಾಡಲಿದೆ.
ಕಾಡಿಗೆ ಮಾರಕವಾಗಿರುವ ವಿದೇಶಿ ಪ್ರಭೇದದ ಸಸ್ಯಗಳನ್ನು ನಿಯಂತ್ರಿಸಲು ಹಾಗೂ ಕೇಂದ್ರ ಸರ್ಕಾರವು ನಿಗದಿ ಮಾಡಿರುವ ಷರತ್ತುಗಳಿಗೆ ಅನುಗುಣವಾಗಿ ಪ್ರಮಾಣಪತ್ರ ಪಡೆದಿರುವ ಆನೆಯ ಮಾಲೀಕರು ಆನೆಗಳನ್ನು ಸಾಗಿಸಲು ಅವಕಾಶ ನೀಡುವ ಅಂಶವೂ ಮಸೂದೆಯಲ್ಲಿ ಇದೆ.
ಅಳಿವಿನಂಚಿನಲ್ಲಿರುವ ವನ್ಯಜೀವಿ ಮತ್ತು ಸಸ್ಯಗಳ ಅಂತರರಾಷ್ಟ್ರೀಯ ವ್ಯಾಪಾರವನ್ನು ನಿಯಂತ್ರಿಸುವ ಸಲುವಾಗಿ ಮೂಲ ಕಾಯ್ದೆಗೆ ಹೊಸ ಭಾಗ '5ಬಿ' ಅನ್ನು ಸೇರಿಸಲಾಗಿದೆ. ರಾಜ್ಯಗಳು ಈ ಕುರಿತು ಸ್ಥಾಯಿ ಸಮಿತಿಗಳನ್ನು ರಚಿಸಿಕೊಳ್ಳಬಹುದಾಗಿದೆ.