ನವದೆಹಲಿ : 'ಪಂಜಾಬ್‌ನ ಅಂತರರಾಷ್ಟ್ರೀಯ ಗಡಿ ಮೂಲಕ ಭಾರತದತ್ತ ಸಾಗಿ ಬರುತ್ತಿದ್ದ ಪಾಕಿಸ್ತಾನದ ಡ್ರೋನ್‌ವೊಂದನ್ನು ಗಡಿ ಭದ್ರತಾ ಪಡೆಯವರು (ಬಿಎಸ್‌ಎಫ್) ಹೊಡೆದುರುಳಿಸಿದ್ದಾರೆ' ಎಂದು ಬಿಎಸ್‌ಎಫ್ ವಕ್ತಾರರೊಬ್ಬರು ಸೋಮವಾರ ತಿಳಿಸಿದ್ದಾರೆ.
'ಅಮೃತಸರದ ರಾಜತಾಲ್ ಗ್ರಾಮದ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ 7.40ರ ಸುಮಾರಿಗೆ ಡ್ರೋನ್ ಕಾಣಿಸಿಕೊಂಡಿತ್ತು. ಗಸ್ತಿನಲ್ಲಿದ್ದ ಸಿಬ್ಬಂದಿ ಗುಂಡು ಹಾರಿಸಿ ಅದನ್ನು ನೆಲಕ್ಕುರುಳಿಸಿದ್ದಾರೆ. ಗಡಿ ರೇಖೆ ಬಳಿ ಅದನ್ನು ವಶಕ್ಕೆ ಪಡೆಯಲಾಗಿದ್ದು, ಇದು ಯಾವುದಾದರೂ ವಸ್ತುವನ್ನು ಹೊತ್ತುತಂದು ಸುತ್ತಲಿನ ಪ್ರದೇಶದಲ್ಲಿ ಹಾಕಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ' ಎಂದು ಅವರು ಮಾಹಿತಿ ನೀಡಿದ್ದಾರೆ.
'ಚೀನಾದಲ್ಲಿ ನಿರ್ಮಿತವಾಗಿರುವ ಈ ಡ್ರೋನ್ ಗುಂಡಿನ ದಾಳಿಯಿಂದ ಪತನಗೊಂಡಿದೆಯೇ ಅಥವಾ ಬ್ಯಾಟರಿ ಡಿಸ್ಚಾರ್ಜ್‌ನಿಂದ ಕೆಳಗೆ ಬಿದ್ದಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ' ಎಂದು ತಿಳಿಸಿದ್ದಾರೆ.
ಪಂಜಾಬ್ ಬಳಿ ಹೋದ ವಾರ ಗಡಿ ಭದ್ರತಾ ಪಡೆಯವರು ಪಾಕಿಸ್ತಾನಕ್ಕೆ ಸೇರಿದ್ದ ಮೂರು ಡ್ರೋನ್‌ಗಳನ್ನು ಹೊಡೆದುರುಳಿಸಿದ್ದರು.