ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಚೀನಾದ ಅತಿಥಿಗೃಹದ ಬಳಿ ದೊಡ್ಡ ಸ್ಫೋಟ ಮತ್ತು ಗುಂಡಿನ ದಾಳಿ ನಡೆದಿದ್ದು ಆಫ್ಘಾನ್ ಪಡೆ ಕಟ್ಟಡವನ್ನು ಸುತ್ತುವರೆದಿದೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಅಧಿಕಾರಕ್ಕೆ ಬಂದ ನಂತರ ಅಫ್ಘಾನಿಸ್ತಾನದಲ್ಲಿ ಭದ್ರತಾ ಪರಿಸ್ಥಿತಿ ಸುಧಾರಿಸಿದೆ ಎಂದು ತಾಲಿಬಾನ್ ಹೇಳಿಕೊಂಡರೂ, ಅಲ್ಲಿ ಅನೇಕ ಸ್ಫೋಟಗಳು ಮತ್ತು ದಾಳಿಗಳು ನಡೆಯುತ್ತಲೇ ಇವೆ. ಈ ಹಲವು ದಾಳಿಗಳ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಹೊತ್ತುಕೊಂಡಿದೆ.
ಸ್ಫೋಟ ಸಂಬಂಧ ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದು ಅತಿಥಿ ಗೃಹದ ಬಳಿ ಭಾರೀ ಸ್ಫೋಟ ಸಂಭವಿಸಿದ್ದು ನಂತರ ಅನೇಕ ಗುಂಡಿನ ದಾಳಿ ನಡೆದವು ಎಂದು ಹೇಳಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸ್ಫೋಟದ ಬಗ್ಗೆ ಪ್ರತಿಕ್ರಿಯಿಸಲು ಭದ್ರತಾ ಅಧಿಕಾರಿಗಳು ನಿರಾಕರಿಸಿದ್ದಾರೆ. ಕಾಬೂಲ್‌ನ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಒಂದಾದ ಶಹರ್-ಎ-ನಾವ್‌ನಲ್ಲಿ ಸ್ಫೋಟ ಸಂಭವಿಸಿದೆ.
ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಚೀನಾದ ಅನೇಕ ಉದ್ಯಮಿಗಳು ಅಫ್ಘಾನಿಸ್ತಾನಕ್ಕೆ ಬಂದು ಹೋಗಲಾರಂಭಿಸಿದ್ದಾರೆ. ಬೀಜಿಂಗ್ ಅಫ್ಘಾನಿಸ್ತಾನದಲ್ಲಿ ತನ್ನ ರಾಯಭಾರ ಕಚೇರಿಯನ್ನು ಪ್ರಾರಂಭಿಸಿದೆ. ಆದರೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವನ್ನು ಚೀನಾ ಅಧಿಕೃತವಾಗಿ ಗುರುತಿಸುವುದಿಲ್ಲ.