ಕೊಚ್ಚಿ: ಮಲಯಾಳಂ ನಟ ಶೈನ್ ಟಾಮ್ ಚಾಕೊ ಮತ್ತೊಮ್ಮೆ ತನ್ನ ಅಸಭ್ಯ ನಡವಳಿಕೆಯ ಮೂಲಕ ಸುದ್ದಿಯಾಗಿದ್ದಾರೆ. ಅವರು ದುಬೈನಿಂದ ಹತ್ತಿದ ವಿಮಾನದಲ್ಲಿ ಅಶಿಸ್ತಿನ ವರ್ತನೆ ತೋರಿದ್ದಕ್ಕಾಗಿ ಮತ್ತೊಮ್ಮೆ ತೊಂದರೆಗೆ ಸಿಲುಕಿದ್ದಾರೆ.
ಅವರನ್ನು ವಿಮಾನದಿಂದ ಬಲವಂತವಾಗಿ ಕೆಳಗಿಳಿಸಲಾಗಿದೆ ಎಂದು 'ದಿ ನ್ಯೂಸ್ ಮಿನಿಟ್' ವರದಿ ಮಾಡಿದೆ.
AI 934 Dreamliner ವಿಮಾನವು ಶನಿವಾರ, ಡಿಸೆಂಬರ್ 10 ರಂದು ಮಧ್ಯಾಹ್ನ 1.30 ರ ಸುಮಾರಿಗೆ ದುಬೈನಿಂದ ಕೊಚ್ಚಿಗೆ ಹೊರಟಿತ್ತು.
ಶೈನ್ ಅವರನ್ನು ಬಲವಂತವಾಗಿ ವಿಮಾನದಿಂದ ಕೆಳಗಿಳಿಸಿ ವಿಮಾನ ನಿಲ್ದಾಣದ ಸೆಕ್ಯೂಟಿರಿಗೆ ಒಪ್ಪಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ವಿಮಾನನಿಲ್ದಾಣದಲ್ಲಿ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಶೈನ್ ಅವರು 'ನಶೆ' ಯಲ್ಲಿರುವುದು ತಿಳಿದುಬಂದಿದೆ. ಹೀಗಾಗಿ ಅವರನ್ನು ವಿಮಾನದಲ್ಲಿ ಪ್ರಯಾಣಿಸಲು ಅನರ್ಹರೆಂದು ಕೆಳಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕೆಲವು ವರದಿಗಳ ಪ್ರಕಾರ ನಟ ವಿಮಾನದ ಕಾಕ್‌ಪಿಟ್‌ಗೆ ನುಗ್ಗಲು ಪ್ರಯತ್ನಿಸಿದ್ದಾನೆ. ಆದರೆ ಈ ಸುದ್ದಿ ದೃಢಪಟ್ಟಿಲ್ಲ.
ಶೈನ್ ಅವರು ತಮ್ಮ 'ಭಾರತ್ ಸರ್ಕಸ್'' ಚಿತ್ರದ ಪ್ರಚಾರಕ್ಕಾಗಿ ದುಬೈಗೆ ಇತರ ಸಿಬ್ಬಂದಿಯೊಂದಿಗೆ ತೆರಳಿದ್ದರು.
ಶೈನ್ ಕಾಕ್‌ಪಿಟ್‌ಗೆ ಬಲವಂತವಾಗಿ ನುಗ್ಗಲು ಪ್ರಯತ್ನಿಸಲಿಲ್ಲ ಎಂದು ಚಿತ್ರದ ನಿರ್ದೇಶಕ ಸೋಹನ್ ಸೀನುಲಾಲ್ ಸ್ಪಷ್ಟಪಡಿಸಿದರು. ಸಿಬ್ಬಂದಿ ಒಟ್ಟಿಗೆ ವಿಮಾನ ಹತ್ತಲು ಉದ್ದೇಶಿಸಿದ್ದರೂ ಶೈನ್ ಅವರು ಸಂಬಂಧಿಕರನ್ನು ಭೇಟಿ ಮಾಡಬೇಕಾಗಿದ್ದರಿಂದ ವಿಮಾನವನ್ನು ತಪ್ಪಿಸಿಕೊಂಡರು. ಹಾಗಾಗಿ ಮಧ್ಯಾಹ್ನ 1.30ಕ್ಕೆ ಮತ್ತೊಂದು ವಿಮಾನವನ್ನು ಕಾಯ್ದಿರಿಸಿದರು ಎಂದು ನಿರ್ದೇಶಕರು ಹೇಳಿದರು.
ನಟ ಶೈನ್ ದಣಿದಿದ್ದರು ಹಾಗೂ ಬೇರೆಯವರ ವಿಮಾನದ ಸೀಟಿನಲ್ಲಿ ಮಲಗಲು ಪ್ರಯತ್ನಿಸಿದ್ದರು. ಇದನ್ನು ವಿಮಾನ ಸಿಬ್ಬಂದಿಗಳು ಪ್ರಶ್ನಿಸಿದರು ಎಂದು ವರದಿಯಾಗಿದೆ.