ತಿರುವನಂತಪುರಂ: ತಮ್ಮ ತಾಯಿ ಹೀರಾಬೆನ್ ಮೋದಿ ಅವರ ನಿಧನದ ಹಿನ್ನೆಲೆಯಲ್ಲಿ ಯಾವುದೇ ಪೂರ್ವ ನಿಗದಿತ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸದಂತೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಚಿವ ಸಂಪುಟ ಸಹೋದ್ಯೋಗಿಗಳಿಗೆ ಸೂಚನೆ ನೀಡಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಹೇಳಿದ್ದಾರೆ.
ತಿರುವನಂತಪುರಂನ ವರ್ಕಲಾದಲ್ಲಿ 90ನೇ ಶಿವಗಿರಿ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ರಾಜನಾಥ್ ಸಿಂಗ್, ಮೊದಲು ಮೋದಿಯವರ ತಾಯಿ ನಿಧನಕ್ಕೆ ಸಂತಾಪ ಸೂಚಿಸಿದರು. ನಿಧನದ ಸುದ್ದಿ ಕೇಳಿದ ನಂತರ ಕಾರ್ಯಕ್ರಮ ರದ್ದುಗೊಳಿಸಿ ದೆಹಲಿಗೆ ತೆರಳಲು ಸಿದ್ಧನಾಗಿದ್ದೆ ಎಂದು ಹೇಳಿದರು.
"ಆದರೆ ಯಾರೂ ತಮ್ಮ ಪೂರ್ವ ನಿಗದಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಬಾರದು ಮತ್ತು ಅವುಗಳಲ್ಲಿ ಭಾಗವಹಿಸಿದ ನಂತರವೇ ಹಿಂತಿರುಗಬೇಕೆಂದು ಪ್ರಧಾನಿ ಸೂಚಿಸಿದ್ದಾರೆ" ಎಂದು ರಾಜನಾಥ್ ಸಿಂಗ್ ತಿಳಿಸಿದರು.
ಹೀರಾಬೆನ್ ಮೋದಿ ಅವರು ಇಂದು ಬೆಳಗಿನ ಜಾವ ಗಾಂಧಿನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಪ್ರಧಾನಿ ಮೋದಿ ಅವರು ತಮ್ಮ ತಾಯಿಯ ಅಂತ್ಯಕ್ರಿಯೆ ಮುಗಿಸಿ ತಮ್ಮ ಕರ್ತವ್ಯಕ್ಕೆ ಮರಳಿದ್ದಾರೆ.
ಪ್ರಧಾನಿ ಮೋದಿ ತಮ್ಮ ತಾಯಿಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಹೌರಾ ಮತ್ತು ನ್ಯೂ ಜಲ್ಪೈಗುರಿ ನಡುವೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಅಲ್ಲದೆ ವೀಡಿಯೊ ಕಾನ್ಫರೆನ್ಸ್ ಮೂಲಕ ಎರಡು ಬ್ಯಾಕ್-ಟು-ಬ್ಯಾಕ್ ಸಭೆಗಳಲ್ಲಿ ಭಾಗವಹಿಸಿದರು.