ಕಾಸರಗೋಡು: ಹೈನುಗಾರಿಕೆ ಕ್ಷೇತ್ರದ ಹೊಸ ಉದ್ಯಮಿಗಳನ್ನು ಆಕರ್ಷಿಸುವಲ್ಲಿ ಸಬ್ಸಿಡಿ ಮೊತ್ತ ಸಹಕಾರಿಯಾಗಲಿದೆ ಎಂದು ಪಶು ಸಂಗೋಪನಾ ಖಾತೆ ಸಚಿವೆ ಜೆ. ಚಿಂಜು ರಾಣಿ ತಿಳಿಸಿದ್ದಾರೆ.
ಅವರು ಹೈನುಗಾರಿಕೆ ಅಭಿವೃದ್ಧಿ ಇಲಾಖೆ, ಜಿಲ್ಲಾ ಡೈರಿ ಸಹಕಾರಿ ಸಂಘಗಳು, ಮಿಲ್ಮಾ ಹಾಗೂ ಕೇರಳ ಫೀಡ್ಸ್ ವತಿಯಿಂದ ಚಿಮೇನಿ ನಜಂದಾಡಿಯಲ್ಲಿ ನಡೆದ ಜಿಲ್ಲಾ ಹೈನುಗಾರರ ಸಮಾವೇಶ, ಜಾನುವಾರು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಹೈನುಗಾರರಿಗೆ ಹೆಚ್ಚಿಸಲಾಗಿರುವ ಮೊತ್ತವನ್ನು ಮುಂದಿನ ವರ್ಷದಿಂದ ನೀಡಲಾಗುವುದು. ಕೇರಳವು ಭಾರತದಲ್ಲಿ ಅತಿ ಹೆಚ್ಚು ಹಾಲು ಉತ್ಪಾದಿಸುವ ರಾಜ್ಯವಾಗಬೇಕು. ಇದಕ್ಕಾಗಿ ಹಸುಗಳ ಸಂಖ್ಯೆಯನ್ನು ಹೆಚ್ಚಿಸಬೇಕಾದ ಅನಿವಾರ್ಯತೆಯಿದೆ. ಕೆಎಲ್‍ಡಿ ಕೌನ್ಸಿಲ್ ಹಸುಗಳ ಸಂತಾನೋತ್ಪತ್ತಿಗೆ ಉಚಿತ ವೀರ್ಯವನ್ನು ಒದಗಿಸುತ್ತದೆ. ರೈತರು ರಾಸುಗಳಿಗೆ ಸಮಯಕ್ಕೆ ಸರಿಯಾಗಿ ಲಸಿಕೆ ಹಾಕುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಶಾಸಕ ಎಂ.ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ಮಿಲ್ಮಾ ಅಧ್ಯಕ್ಷ ಕೆ. ಮಾಧವನ್, ಮಾನ್ಯೇರ, ಎಂ. ಲಕ್ಷ್ಮಿ, ಕೆ. ಮಣಿಕಂಠನ್, ಕೆಸಿಎಂಎಂಎಫ್ ಅಧ್ಯಕ್ಷ ಪಿ.ಪಿ.ನಾರಾಯಣನ್, ಕಯ್ಯೂರ್ ಚಿಮೇನಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಪಿ.ವತ್ಸಲನ್, ನೀಲೇಶ್ವರಂ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಪಿ.ಕೆ.ಲಕ್ಷ್ಮಿ ಉಪಸ್ಥಿತರಿದ್ದರು. ಹೈನುಗಾರಿಕೆ ವಲಯದಲ್ಲಿನ ಸಮಸ್ಯೆಗಳು ಮತ್ತು ಪರಿಹಾರಗಳ ಕುರಿತು ತಲಶ್ಶೇರಿಯ ಹಿರಿಯ ಹೈನು ಅಭಿವೃದ್ಧಿ ಅಧಿಕಾರಿ ವಿ.ಕೆ.ನಿಶಾದ್ ಉಪನ್ಯಾಸ ನೀಡಿದರು. ಹಾಲು ಅಭಿವದ್ಧಿ ವಿಚಾರ ಸಂಕಿರಣದಲ್ಲಿ ಹೈನು ಅಭಿವೃದ್ಧಿ ಇಲಾಖೆಯ ಗುಣಮಟ್ಟ ನಿಯಂತ್ರಣಾಧಿಕಾರಿ ಪಿ.ರಮ್ಯಾ ಹಾಗೂ ಕಾಸರಗೋಡು ಡೈರಿ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ಸಿಜೋನ್ ತರಗತಿ ನಡೆಸಿದರು. ಹೈನುಗಾರರ ಸಮಾವೇಶದ ಅಂಗವಾಗಿ ಜಿಲ್ಲಾ ಮಟ್ಟದ ಜಾನುವಾರು ಪ್ರದರ್ಶನ, ಹೈನುಗಾರಿಕೆ, ಹಾಲಿನ ರಸಪ್ರಶ್ನೆ ಸ್ಪರ್ಧೆ, ಹೈನುಗಾರರು ಹಾಗೂ ರೈತ ಸಮೂಹಗಳಿಗೆ ಸನ್ಮಾನ ಸೇರಿದಂತೆ ಕಾರ್ಯಕ್ರಮಗಳು ನಡೆಯಿತು.
ಚಿಮೇನಿಯಲ್ಲಿ ಜಿಲ್ಲಾ ಹೈನುಗಾರರ ಸಮಾವೇಶ, ಜಾನುವಾರು ಪ್ರದರ್ಶನ
0
ಡಿಸೆಂಬರ್ 06, 2022
Tags