ಶಿಲ್ಲಾಂಗ್: ತಮ್ಮ 8 ವರ್ಷಗಳ ಆಡಳಿತಾವಧಿಯಲ್ಲಿ ಈಶಾನ್ಯ ಭಾಗದ ರಾಜ್ಯಗಳ ಅಭಿವೃದ್ಧಿಗೆ ಬರುವ ಎಲ್ಲಾ ಅಡೆತಡೆಗಳನ್ನು ನಿವಾರಿಸಿರುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಈಶಾನ್ಯ ಪರಿಷತ್ತಿನ(NEC) ಸುವರ್ಣ ವರ್ಷಾಚರಣೆಯ ಸಂದರ್ಭ ಇಂದು ಶಿಲ್ಲಾಂಗ್ ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಈಶಾನ್ಯ ರಾಜ್ಯಗಳಿಗೆ ವಾಯುಸಂಚಾರ ಸಂಪರ್ಕ ಸೇವೆಯನ್ನು ಹೆಚ್ಚಿಸಿರುವುದು ಕೃಷಿ ಉತ್ಪನ್ನಗಳ ರಫ್ತಿಗೆ ಸಹಾಯಕವಾಗಿದ್ದು ರೈತರಿಗೆ ಅನುಕೂಲವಾಗಿದೆ ಎಂದರು.
ಖತಾರ್ ನಲ್ಲಿ ಫೀಫಾ ವಿಶ್ವಕಪ್ ಅಂತಿಮ ಪಂದ್ಯಕ್ಕೆ ಮುನ್ನ ಈಶಾನ್ಯ ಭಾಗಗಳ ಅಭಿವೃದ್ಧಿಗೆ ಇರುವ ಅಡೆತಡೆಗಳಿಗೆ ಸರ್ಕಾರ ಕೆಂಪು ಕಾರ್ಡ್ ತೋರಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು.
ಭ್ರಷ್ಟಾಚಾರ, ತಾರತಮ್ಯ, ಹಿಂಸಾಚಾರ, ವೋಟ್ ಬ್ಯಾಂಕ್ ರಾಜಕೀಯದಂತಹ ಸಮಸ್ಯೆಗಳನ್ನು ತಮ್ಮ ಸರ್ಕಾರ ನಿವಾರಿಸಿದೆ ಎಂದು ಇಂದಿನ ತಮ್ಮ 26 ನಿಮಿಷಗಳ ಭಾಷಣದಲ್ಲಿ ಪ್ರಧಾನಿ ಹೇಳಿದ್ದಾರೆ. ಈ ಹಿಂದೆ ಈಶಾನ್ಯ ರಾಜ್ಯಗಳನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿದ್ದವು. ಈಗ ನಾವು ಆ ವಿಭಜನೆಯನ್ನು ತೆಗೆದಿದ್ದೇನೆ ಎಂದರು.
ಪ್ರಧಾನ ಮಂತ್ರಿಗಳು ಈ ಭಾಗದಲ್ಲಿ ಹಲವು ಯೋಜನೆಗಳನ್ನು ಉದ್ಘಾಟಿಸಿ, ಇನ್ನು ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ನ್ಯೂ ಶಿಲ್ಲಾಂಗ್ ಟೌನ್ ಶಿಪ್ ನಲ್ಲಿ ಐಐಎಂ-ಶಿಲ್ಲಾಂಗ್ ಕ್ಯಾಂಪಸ್ ನ್ನು ಉದ್ಘಾಟಿಸಿದರು.