ನವದೆಹಲಿ : ಬಾಲಿವುಡ್ ನಟಿ ಕಂಗನಾ ರನೌತ್ ಅವರು ತಮ್ಮ ಮುಂಬರುವ 'ಎಮರ್ಜೆನ್ಸಿ' ಚಿತ್ರವನ್ನು ಸಂಸತ್ತಿನ ಆವರಣದೊಳಗೆ ಚಿತ್ರೀಕರಿಸಲು ಅನುಮತಿ ನೀಡುವಂತೆ ಲೋಕಸಭೆ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ.
ಕಂಗನಾ ಅನುಮತಿ ಕೋರಿ ಸಚಿವಾಲಯಕ್ಕೆ ಬರೆದಿರುವ ಪತ್ರ ಪರಿಶೀಲಿಸಲಾಗುತ್ತಿದೆ. ಆದರೆ, ದುರದೃಷ್ಟವಶಾತ್ ಆಕೆಗೆ ಅನುಮತಿ ಸಿಗಲಾರದು ಎಂದು ಮೂಲಗಳು ಭಾನುವಾರ ತಿಳಿಸಿವೆ.
ಇಂದಿರಾಗಾಂಧಿ ಅವರ ಅಧಿಕಾರಾವಧಿಯಲ್ಲಿ ಹೇರಿದ್ದ ತುರ್ತುಪರಿಸ್ಥಿತಿ ಕುರಿತು ನಿರ್ಮಿಸುತ್ತಿರುವ 'ಎಮರ್ಜೆನ್ಸಿ' ಚಿತ್ರದ ಕೆಲವು ದೃಶ್ಯಗಳನ್ನು ಸಂಸತ್ತಿನ ಆವರಣದೊಳಗೆ ಚಿತ್ರೀಕರಿಸಲು ಅನುಮತಿ ನೀಡುವಂತೆ ಕಂಗನಾ ಪತ್ರದಲ್ಲಿ ಕೋರಿದ್ದಾರೆ.
ಸಾಮಾನ್ಯವಾಗಿ ಖಾಸಗಿಯವರಿಗೆ ಸಂಸತ್ ಆವರಣದೊಳಗೆ ಸಿನಿಮಾ ಚಿತ್ರೀಕರಣ, ವಿಡಿಯೊ ಚಿತ್ರೀಕರಣ ಅಥವಾ ಛಾಯಾಚಿತ್ರೀಕರಣಕ್ಕೆ ಅನುಮತಿ ಇಲ್ಲ. ಆದರೆ, ಸರ್ಕಾರದ ಕೆಲಸ ಅಥವಾ ಇನ್ಯಾವುದೋ ಅಧಿಕೃತ ಉದ್ದೇಶದ ಕೆಲಸಕ್ಕೆ ಇದು ಅನ್ವಯಿಸದು. ಸರ್ಕಾರದ ವಾಹಿನಿ ದೂರದರ್ಶನ ಮತ್ತು ಸಂಸದ್ ಟಿ.ವಿಗೆ ಮಾತ್ರ ಕಾರ್ಯಕ್ರಮ ಅಥವಾ ಸಂಸತ್ತಿನ ಒಳಗಿನ ಘಟನೆಗಳ ಬಗ್ಗೆ ಚಿತ್ರೀಕರಣ ಮಾಡಲು ಅನುಮತಿ ಇದೆ ಎಂದು ಮೂಲಗಳು ತಿಳಿಸಿವೆ.
ದೇಶದ ರಾಜಕೀಯ ಇತಿಹಾಸದಲ್ಲಿ ಕರಾಳ ಅಧ್ಯಾಯವೆನಿಸಿದ ತುರ್ತು ಪರಿಸ್ಥಿತಿಯನ್ನು ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು 1975ರ ಜೂನ್ 25ರಿಂದ 1977ರ ಮಾರ್ಚ್ 21ರವರೆಗಿನ 21 ತಿಂಗಳ ಕಾಲ ಹೇರಿದ್ದರು.
ತುರ್ತುಪರಿಸ್ಥಿತಿಯ ಕರಾಳತೆಯನ್ನು ತೆರೆದಿಡಲಿರುವ ಈ ಚಿತ್ರದಲ್ಲಿ ಕಂಗನಾ ಅವರು ಇಂದಿರಾ ಗಾಂಧಿಯವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಕಥೆ, ನಿರ್ದೇಶನ ಮತ್ತು ನಿರ್ಮಾಣದ ಜವಾಬ್ದಾರಿಯೂ ಕಂಗನಾ ಅವರದೇ ಆಗಿದೆ. ಚಿತ್ರದ ಚಿತ್ರೀಕರಣ ಇದೇ ವರ್ಷದ ಜೂನ್‌ನಲ್ಲಿ ಆರಂಭವಾಗಿದೆ.