ನವದೆಹಲಿ: 'ಅಕ್ರಮ ಗಳಿಕೆ ಅಥವಾ ಲಂಚದ ಆರೋಪ ಎದುರಿಸುತ್ತಿರುವ ಸರ್ಕಾರಿ ನೌಕರ ಇಲ್ಲವೇ ಅಧಿಕಾರಿ ವಿರುದ್ಧ ಮೌಖಿಕ ಸಾಕ್ಷ್ಯ ಅಥವಾ ಸೂಕ್ತ ದಾಖಲೆಗಳು ಲಭ್ಯವಿಲ್ಲದಿದ್ದಾಗ ಸಾಂದರ್ಭಿಕ ಪುರಾವೆಗಳ ಆಧಾರದಲ್ಲೇ ಅವರನ್ನು ಶಿಕ್ಷೆಗೆ ಗುರಿಪಡಿಸಬಹುದು' ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ನ್ಯಾಯಮೂರ್ತಿ ಎಸ್.ಎ.ನಜೀರ್ ನೇತೃತ್ವದ ಐವರು ಸದಸ್ಯರನ್ನೊಳಗೊಂಡ ನ್ಯಾಯಪೀಠವು ಗುರುವಾರ ಈ ಕುರಿತ ವಿಚಾರಣೆ ನಡೆಸಿತು.
'ಅರ್ಜಿದಾರರು ಹಾಗೂ ಪ್ರಾಸಿಕ್ಯೂಷನ್ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಹಾಗಾದಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಶಿಕ್ಷೆ ವಿಧಿಸಬಹುದು. ಅದರಿಂದ ಆಡಳಿತ ಹಾಗೂ ಪ್ರಭುತ್ವವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಬಹುದು' ಎಂದು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ಎ.ಎಸ್.ಬೋಪಣ್ಣ, ವಿ.ರಾಮಸುಬ್ರಮಣಿಯನ್ ಹಾಗೂ ಬಿ.ವಿ.ನಾಗರತ್ನ ಅವರಿದ್ದ ನ್ಯಾಯಪೀಠ ತಿಳಿಸಿತು.
'ನಿಧನ ಅಥವಾ ಇನ್ನಿತರ ಕಾರಣಗಳಿಂದಾಗಿ ದೂರುದಾರ ನೇರವಾಗಿ ಸಾಕ್ಷ್ಯ ಹೇಳಲು ಲಭ್ಯವಿಲ್ಲದಿದ್ದರೂ ಕೂಡ ಭ್ರಷ್ಟ ಅಧಿಕಾರಿಗಳನ್ನು ಸಂಬಂಧಪಟ್ಟ ನಿಬಂಧನೆಗಳ ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಬಹುದು' ಎಂದು ನ್ಯಾಯಪೀಠ ಹೇಳಿದೆ.
'ವಿವಿಧ ಕಾರಣಗಳಿಂದಾಗಿ ವಿಚಾರಣೆ ವೇಳೆ ದೂರುದಾರನು ತನ್ನ ಬಳಿ ಇರುವ ಸಾಕ್ಷ್ಯವನ್ನು ನ್ಯಾಯಾಲಯಕ್ಕೆ ಒದಗಿಸಲು ಸಾಧ್ಯವಾಗದೆ ಹೋದರೆ, ಇತರೆ ಯಾವುದೇ ಸಾಕ್ಷಿ ಒದಗಿಸುವ ಮೌಖಿಕ ಅಥವಾ ದಾಖಲೆ ರೂಪದ ಪುರಾವೆಗಳನ್ನು ಪರಿಗಣಿಸಬಹುದು. ಇಲ್ಲವೇ ಪ್ರಾಸಿಕ್ಯೂಷನ್ ಸಾಂದರ್ಭಿಕ ಸಾಕ್ಷ್ಯದ ಆಧಾರದಲ್ಲಿ ಅಧಿಕಾರಿ ಅಥವಾ ನೌಕರನ ಮೇಲಿನ ಆರೋಪವನ್ನು ಸಾಬೀತುಪಡಿಸಬಹುದು' ಎಂದೂ ನ್ಯಾಯಪೀಠ ತಿಳಿಸಿದೆ.