ನವದೆಹಲಿ: ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು ಹೆಚ್ಚಿಸಿದರೆ, ಉತ್ತಮವಾಗಿ ಕಾರ್ಯನಿರ್ವಹಿಸದ ನ್ಯಾಯಮೂರ್ತಿಗಳ ಸೇವಾವಧಿಯನ್ನೂ ಹೆಚ್ಚಿಸಿದಂತಾಗುತ್ತದೆ ಎಂದು ನ್ಯಾಯಾಂಗ ಇಲಾಖೆ ಹೇಳಿದೆ.
ಬಿಜೆಪಿ ಸಂಸದ ಸುಶೀಲ್ ಮೋದಿ ನೇತೃತ್ವದ, ಸಿಬ್ಬಂದಿ, ಕಾನೂನು ಹಾಗೂ ನ್ಯಾಯ ಕುರಿತ ಸಂಸದೀಯ ಸಮಿತಿಗೆ ನ್ಯಾಯಾಂಗ ಇಲಾಖೆ ತನ್ನ ಅಭಿಪ್ರಾಯ ತಿಳಿಸಿದೆ.
'ನಿವೃತ್ತಿ ವಯಸ್ಸು ಹೆಚ್ಚಳದಂತಹ ಕ್ರಮವು ಬೇರೆ ರೀತಿಯ ಪರಿಣಾಮಗಳಿಗೆ ಕಾರಣವಾಗುತ್ತದೆ. ಇತರ ಇಲಾಖೆಗಳ ನೌಕರರು ಸಹ ಇದೇ ರೀತಿಯ ಬೇಡಿಕೆಯನ್ನು ಮುಂದಿಡುವ ಸಾಧ್ಯತೆ ಇರುತ್ತದೆ' ಎಂದು ಸಮಿತಿಗೆ ತಿಳಿಸಲಾಗಿದೆ.
'ಬಾಕಿ ಇರುವ ಪ್ರಕರಣಗಳ ಸಂಖ್ಯೆಯನ್ನು ಇಳಿಸುವುದು ಹಾಗೂ ನ್ಯಾಯಾಂಗದಲ್ಲಿ ಪಾರದರ್ಶಕತೆ ತರುವ ಬಗ್ಗೆ ಕ್ರಮ ಕೈಗೊಳ್ಳುವುದನ್ನು ಪರಿಗಣಿಸಬೇಕು' ಎಂದು ಇಲಾಖೆಯು ಸಂಸದೀಯ ಸಮಿತಿಗೆ ತಿಳಿಸಿದೆ.
'ಅನೇಕ ನ್ಯಾಯಮಂಡಳಿಗಳಿಗೆ ನಿವೃತ್ತ ನ್ಯಾಯಮೂರ್ತಿಗಳನ್ನು ನೇಮಕ ಮಾಡಲಾಗುತ್ತದೆ. ಒಂದು ವೇಳೆ ನಿವೃತ್ತಿ ವಯಸ್ಸನ್ನು ಹೆಚ್ಚಿಸಿದಲ್ಲಿ, ಅನೇಕ ನ್ಯಾಯಮಂಡಳಿಗಳಿಗೆ ನೇಮಕಾತಿ ಕಷ್ಟವಾಗಲಿದೆ' ಎಂದೂ ತಿಳಿಸಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು 65 ವರ್ಷ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು 62 ವರ್ಷ ಇದೆ.