ಕೊಚ್ಚಿ: ನ್ಯಾಯಾಧೀಶರು ಮತ್ತು ಉನ್ನತ ಅಧಿಕಾರಿಗಳು ಕಾನೂನಿಗಿಂತ ಮೇಲಲ್ಲ, ಅವರು ಕೂಡ ಕರ್ತವ್ಯ ಲೋಪದ ಪರಿಣಾಮಗಳನ್ನು ಎದುರಿಸಬೇಕು ಎಂದು ಕೇರಳ ಹೈಕೋರ್ಟ್ ಶುಕ್ರವಾರ ಹೇಳಿದೆ.
ಆರೋಪಿಯೊಬ್ಬರಿಗೆ ಶಿಕ್ಷೆ ವಿಧಿಸುವ ಸಲುವಾಗಿ ನಕಲಿ ಸಾಕ್ಷ್ಯ ಸೃಷ್ಟಿಸಿದ ಪ್ರಕರಣದಲ್ಲಿ ಲಕ್ಷದ್ವೀಪದ ಮಾಜಿ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ (ಸಿಜೆಎಂ) ಕೆ.ಚೆರಿಯಕೋಯ ಅವರ ಅಮಾನತಿಗೆ ಆದೇಶಿಸಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
'ಇದು ಎಲ್ಲರಿಗೂ ಪಾಠವಾಗಬೇಕು' ಎಂದಿರುವ ನ್ಯಾಯಮೂರ್ತಿ ಪಿ.ವಿ.ಕುಂಞಿಕೃಷ್ಣನ್, ಸದ್ಯ ಲಕ್ಷದ್ವೀಪದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಯಾಗಿರುವ ಚೆರಿಯಕೋಯ ಅವರನ್ನು ಅಮಾನತು ಮಾಡುವಂತೆ ಲಕ್ಷದ್ವೀಪದ ಆಡಳಿತಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.
'ಪ್ರಕರಣದಲ್ಲಿ ಚೆರಿಯಕೋಯ ಅವರು ಸಾಕ್ಷ್ಯ ಸೃಷ್ಟಿಸುವ ಮೂಲಕ ವಂಚಿಸಿರುವುದು ಸಾಬೀತಾಗಿದೆ' ಎಂದೂ ಹೈಕೋರ್ಟ್ ಹೇಳಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದ ಬೆಂಚ್ ಕ್ಲರ್ಕ್ ಮತ್ತು ದ್ವಿತೀಯ ದರ್ಜೆ ಸಹಾಯಕನ ವಿರುದ್ಧವೂ ತನಿಖೆ ನಡೆಸುವಂತೆ ಆದೇಶಿಸಿದೆ.
ಮೂವರಿಗೂ ಜನವರಿ 23ರಂದು ಹೈಕೋರ್ಟ್‌ಗೆ ಹಾಜರಾಗಲು ಸೂಚಿಸಲಾಗಿದೆ.