ನವದೆಹಲಿ: 2015ರಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಚುನಾವಣಾ ಆಯೋಗವು (Election Commission) ಸ್ವಯಂ ಪ್ರೇರಿತವಾಗಿ ಮತದಾರರ ಪಟ್ಟಿಯಿಂದ 46 ಲಕ್ಷ ನಮೂದುಗಳನ್ನು ಅಳಿಸಿದೆ ಎಂದು ಆರೋಪಿಸಿ ಸಲ್ಲಿಸಲಾದ ಮನವಿಯ ಕುರಿತು ಸುಪ್ರೀಂ ಕೋರ್ಟ್ ಇಂದು ಚುನಾವಣಾ ಆಯೋಗ ಮತ್ತು ಇತರ ಸಂಸ್ಥೆಗಳಿಂದ ಪ್ರತಿಕ್ರಿಯೆ ಕೇಳಿದೆ.
ಸುಪ್ರಿಂ ಕೋರ್ಟ್‌ನ (Supreme Court) ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ (Chief Justice D Y Chandrachud) ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರ ಪೀಠಕ್ಕೆ ಈ ಅರ್ಜಿ ಬರುವ ಮುನ್ನ ತೆಲಂಗಾಣ ಹೈಕೋರ್ಟ್ ಈ ಪಿಐಎಲ್ ಅನ್ನು ತೆಲಂಗಾಣ ಹೈಕೋರ್ಟ್ ಗೆ ಸಲ್ಲಿಸಲಾಗಿತ್ತು. ಈ ವಿಷಯದ ಕುರಿತು ತನ್ನ ಮುಂದೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೋರಿದ ಪರಿಹಾರಗಳನ್ನು ನೀಡಲು ಯಾವುದೇ ಕಾರಣವಿಲ್ಲ ಎಂದು ತೆಲಂಗಾಣ ಹೈಕೋರ್ಟ್ ಏಪ್ರಿಲ್‌ನಲ್ಲಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ, ಅರ್ಜಿದಾರರು ಸುಪ್ರೀಂ ಮೆಟ್ಟಿಲು ಹತ್ತಿದ್ದಾರೆ.
ಪೀಠವು ವಿಚಾರಣೆಗೆ ಒಪ್ಪಿಗೆ ಸೂಚಿಸಿದ್ದು, ಚುನಾವಣಾ ಸಮಿತಿಯ ಜೊತೆಗೆ, ಕೇಂದ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ಆಯಾ ರಾಜ್ಯ ಚುನಾವಣಾ ಆಯೋಗದಿಂದ ಪ್ರತಿಕ್ರಿಯೆಗಳನ್ನು ಕೇಳಿದೆ.
ಆರು ವಾರಗಳ ನಂತರ ವಿಚಾರಣೆಯನ್ನು ಮತ್ತೆ ಕೈಗೆತ್ತಿಕೊಳ್ಳಲಿದೆ.
ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಪ್ರಯತ್ನದಲ್ಲಿ 2015 ರಲ್ಲಿ ಚುನಾವಣಾ ಆಯೋಗವು ಸ್ವಯಂ ಪ್ರೇರಿತವಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಮತದಾರರ ಪಟ್ಟಿಯಿಂದ 46 ಲಕ್ಷ ಮತದಾರರ ದಾಖಲೆಗಳನ್ನು ಅಳಿಸಿದೆ ಎಂದು ಹೈದರಾಬಾದ್ ನಿವಾಸಿ ಶ್ರೀನಿವಾಸ್ ಕೊಡಲಿ ಎಂಬವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದ್ದಾರೆ.