ನವದೆಹಲಿ: ಚೀನಾದಲ್ಲಿ ಕೋವಿಡ್ ಆರ್ಭಟ ಹೆಚ್ಚಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಭಾರತ ಸರ್ಕಾರ ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಈಗಾಗಲೇ ಎಲ್ಲ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಪತ್ರ ಬರೆದಿದೆ.
ಇದೀಗ ಕೇಂದ್ರ ಆರೋಗ್ಯ ಸಚಿವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದು, ರಾಷ್ಟ್ರದ ಹಿತಾಶಕ್ತಿಗಾಗಿ ಭಾರತ್ ಜೋಡೋ ಯಾತ್ರೆಯಲ್ಲಿ ಕರೊನಾ ನಿಯಮಗಳನ್ನು ಖಚಿತಪಡಿಸಿಕೊಳ್ಳಿ ಅಥವಾ ಯಾತ್ರೆಯನ್ನೇ ರದ್ದು ಮಾಡಿ ಎಂದಿದ್ದಾರೆ.
ಆರೋಗ್ಯ ಸಚಿವರ ಪತ್ರಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಇತ್ತೀಚೆಗೆ ಗುಜರಾತಿನಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಪ್ರಚಾರವನ್ನು ಉಲ್ಲೇಖಿಸಿದೆ. ರಾಹುಲ್ ಗಾಂಧಿ ಅವರ ಯಾತ್ರೆಯಿಂದ ಬಿಜೆಪಿ ಹೆದರಿದೆ. ಯಾತ್ರೆಯಿಂದಾಗಿ ಕಾಂಗ್ರೆಸ್ಗೆ ಭಾರಿ ಜನ ಬೆಂಬಲ ವ್ಯಕ್ತವಾಗುತ್ತಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿ ಹೆದರಿರುವ ಬಿಜೆಪಿ ಯಾತ್ರೆ ತಡೆಯಲು ಕೋವಿಡ್ ಕಾರಣ ಹೇಳುತ್ತಿದೆ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಕಿಡಿಕಾರಿದ್ದಾರೆ.
ಇತ್ತೀಚೆಗೆ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಮೂವರು ರಾಜಸ್ಥಾನ ಸಂಸದರು ಪತ್ರ ಬರೆದಿರುವುದನ್ನು ಉಲ್ಲೇಖಿಸಿ ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವೀಯ ಅವರು ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ. ಚೀನಾದಲ್ಲಿ ಕೋವಿಡ್ ಮತ್ತೆ ತನ್ನ ಮೀತಿ ಮೀರಿದ್ದು, ಇತರ ದೇಶಗಳಲ್ಲಿ ಕಳವಳವನ್ನು ಹುಟ್ಟುಹಾಕಿದೆ. ಭಾರತವು ಸದ್ಯ ಕೋವಿಡ್ ನಿರ್ಬಂಧಗಳನ್ನು ಸಡಿಲಗೊಳಿಸಿದ್ದರೂ ಈಗ ಮತ್ತೆ ಕಠಿಣ ಕ್ರಮಗಳ ಬಗ್ಗೆ ಚರ್ಚೆಯಾಗುತ್ತಿದೆ.
ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳ ಬಳಕೆ ಸೇರಿದಂತೆ ಕೋವಿಡ್ ನಿಯಮಗಳನ್ನು ಯಾತ್ರೆಯಲ್ಲಿ ಕಟ್ಟುನಿಟ್ಟಾಗಿ ಅನುಸರಿಸಬೇಕು ಮತ್ತು ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಬೇಕು ಎಂದು ನಾನು ರಾಹುಲ್ ಗಾಂಧಿ ಅವರಲ್ಲಿ ವಿನಂತಿಸುತ್ತೇನೆ ಎಂದು ಆರೋಗ್ಯ ಸಚಿವರು ಡಿಸೆಂಬರ್ 20 ರಂದು ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಭಾರತ್ ಜೋಡೋ ಯಾತ್ರೆ ರಾಜಸ್ಥಾನದಿಂದ ಬುಧವಾರ ಹರಿಯಾಣವನ್ನು ಪ್ರವೇಶಿಸಿದೆ.
ಕೋವಿಡ್ ನಿಯಮಗಳನ್ನು ಅನುಸರಿಸಲು ಸಾಧ್ಯವಾಗದಿದ್ದರೆ, ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಕೋವಿಡ್ ಸಾಂಕ್ರಾಮಿಕ ರೋಗದಿಂದ ದೇಶವನ್ನು ಉಳಿಸಲು, ರಾಷ್ಟ್ರೀಯ ಹಿತಾಸಕ್ತಿಯಿಂದ 'ಭಾರತ್ ಜೋಡೋ ಯಾತ್ರೆ'ಯನ್ನು ಸ್ಥಗಿತಗೊಳಿಸುವಂತೆ ನಾನು ರಾಹುಲ್ ಗಾಂಧಿಯವರಲ್ಲಿ ವಿನಂತಿಸುತ್ತೇನೆ ಎಂದು ಸಚಿವರು ಬರೆದಿದ್ದಾರೆ.
ಯಾತ್ರೆಯಲ್ಲಿ ಭಾಗವಹಿಸಿದ ನಂತರ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಕರೊನಾ ವೈರಸ್ ಸೋಂಕಿಗೆ ಒಳಗಾಗಿದ್ದನ್ನು ಉಲ್ಲೇಖಿಸಿ ರಾಜಸ್ಥಾನದ ಮೂವರು ಸಂಸದರ ಬರೆದಿರುವ ಪತ್ರವನ್ನು ಸಹ ರಾಹುಲ್ ಗಾಂಧಿಗೆ ಕಳುಹಿಸಿರುವ ಪತ್ರದಲ್ಲಿ ಲಗತ್ತಿಸಿದ್ದಾರೆ.
ಈ ಪತ್ರವು ಯಾತ್ರೆಯನ್ನು ತಬ್ಬಿಬ್ಬುಗೊಳಿಸುವ ತಂತ್ರ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದರು. ಈ ಯಾತ್ರೆಯು ಬಿಜೆಪಿಯನ್ನು ಬೆಚ್ಚಿಬೀಳಿಸಿದೆ ಮತ್ತು ಭಯಭೀತರಾಗಿ ಪ್ರತಿಕ್ರಿಯಿಸುವಂತೆ ಮಾಡಿದೆ ಎಂದಿದ್ದಾರೆ. ಗುಜರಾತ್‌ನಲ್ಲಿ ಮತ ಕೇಳಲು ಮೋದಿಜಿ ಮನೆ ಮನೆಗೆ ಹೋದಾಗ ಅವರೇನು ಮುಖವಾಡ ಧರಿಸಿದ್ದರಾ? ಎಂದು ಪ್ರಶ್ನೆ ಮಾಡಿದ್ದಾರೆ.
ಪತ್ರದ ಬಗ್ಗೆ ರಾಹುಲ್ ಗಾಂಧಿ ಇದುವರೆಗೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.