ಕೊಚ್ಚಿ: ಮಗುವನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಏಕೆ ಎಂದು ಪ್ರಶ್ನಿಸಿದ ಮಾವನನ್ನು ಪ್ರಿಯಕರ ಜೊತೆ ಸೇರಿ ಕೊಲೆ ಮಾಡಲು ಯತ್ನಿಸಿದ ಸೊಸೆಯನ್ನು ಪ್ರಿಯಕರನ ಸಮೇತ ಬಂಧಿಸಿರುವ ಘಟನೆ ಕೇರಳದಲ್ಲಿ ನಡೆದಿದೆ.
ಆರೋಪಿಗಳನ್ನು ಶ್ರೀಲಕ್ಷ್ಮೀ ಮತ್ತು ಆಕೆಯ ಪ್ರಿಯಕರ ಬಿಪಿನ್ ಎಂದು ಗುರುತಿಸಲಾಗಿದೆ.
ಇಬ್ಬರು ಕೂಡ ನೂರನಾಡಿನ ನಿವಾಸಿಗಳು. ಆರೋಪಿ ಶ್ರೀಲಕ್ಷ್ಮೀ ತನ್ನ ಮಾವ ರಾಜು ಎಂಬುವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಳು.
ಈ ಘಟನೆ ನವೆಂಬರ್ 29ರಂದು ಶ್ರೀಲಕ್ಷ್ಮೀಯ ಮಾವನ ಮನೆಯ ಸಮೀಪದಲ್ಲೇ ನಡೆದಿತ್ತು. ಅಂದು ಮುಖ ಕಾಣದಂತೆ ಹೆಲ್ಮೆಟ್ ಧರಿಸಿ, ಬೈಕ್ನಲ್ಲಿ ಬಂದ ಯುವಕ ವಾಕಿಂಗ್ ಮಾಡುತ್ತಿದ್ದ ರಾಜುವಿನ ಮೇಲೆ ಕಬ್ಬಿಣದ ಸಲಾಕೆಯಿಂದ ಮನಸೋ ಇಚ್ಛೆ ದಾಳಿ ಮಾಡಿದ್ದ. ತನ್ನ ಮೇಲೆ ಹಲ್ಲೆ ಮಾಡಿದ ವ್ಯಕ್ತಿ ಯಾರು ಎಂಬುದು ರಾಜುಗೆ ಮಾತ್ರ ತಿಳಿಯಲೇ ಇಲ್ಲ. ಗಂಭೀರ ಗಾಯಗೊಂಡಿದ್ದ ರಾಜು ಅವರನ್ನು ಮಾವೆಲಿಕ್ಕರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ತಲೆಗೆ 15 ಹೊಲಿಗೆ ಹಾಕಲಾಗಿದೆ.
ದೂರಿನ ಆಧಾರದ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಿದ ನೂರನಾಡ್ ಪೊಲೀಸರು ತನಿಖೆ ಆರಂಭಿಸಿದರು. ಸಮೀಪದ ಸಿಸಿಟಿವಿ ಕ್ಯಾಮೆರಾಗಳನ್ನು ಆಧರಿಸಿ ಆರೋಪಿಯನ್ನು ಪತ್ತೆಹಚ್ಚಲು ಮುಂದಾದರೂ ಕೂಡ ಪೊಲೀಸರಿಗೆ ಯಾವುದೇ ಸುಳಿವು ಸಿಗಲಿಲ್ಲ. ಆದರೆ, ಸಂತ್ರಸ್ತ ರಾಜು ಮತ್ತು ಶ್ರೀಲಕ್ಷ್ಮೀ ನಡುವೆ ನಡೆದಿದ್ದ ಜಗಳದ ಸುಳಿವು ಹಿಡಿದು ಹೊರಟ ಪೊಲೀಸರಿಗೆ ಇಡೀ ಪ್ರಕರಣದ ಸಂಚುಗಾರ್ತಿ ಶ್ರೀಲಕ್ಷ್ಮೀ ಎಂಬುದು ಬಯಲಾಗಿದೆ.
ಮಾವನ ಮಾತಿನಿಂದ ರೊಚ್ಚಿಗೆದ್ದಿದ್ದ ಶ್ರೀಲಕ್ಷ್ಮೀ ಆತನನ್ನು ಮುಗಿಸಿಬಿಡಲು ಸಂಚು ರೂಪಿಸಿದ್ದಳು. ತನ್ನ ಪ್ರಿಯಕರ ಬಿಪಿನ್ನನ್ನು ಸಂಪರ್ಕಿಸಿದ ಶ್ರೀಲಕ್ಷ್ಮೀ ತನ್ನ ಮಾವನನ್ನು ಮುಗಿಸುವಂತೆ ಹೇಳಿದ್ದಳು. ವಾಕಿಂಗ್ಗೆ ತೆರಳಿದ್ದ ರಾಜು ಮನೆಯ ಸಮೀಪ ಬರುತ್ತಿದ್ದಂತೆ ಆತನನ್ನು ಹಿಂಬಾಲಿಸಿಕೊಂಡು ಬಂದಿದ್ದ ಬಿಪಿನ್, ಕಬ್ಬಿಣದ ಸಲಾಕೆಯಿಂದ ದಾಳಿ ಮಾಡಿ, ಅಲ್ಲಿಂದ ಪರಾರಿಯಾಗಿದ್ದನು.
ತೀವ್ರ ವಿಚಾರಣೆಯ ಬಳಿಕ ಶ್ರೀಲಕ್ಷ್ಮೀ ತಪ್ಪೊಪ್ಪಿಕೊಂಡಿದ್ದು, ಆಕೆಯನ್ನು ಮತ್ತು ಆಕೆಯ ಪ್ರಿಯಕರನನ್ನು ನೂರನಾಡ್ ಪೊಲೀಸರು ಬಂಧಿಸಿದ್ದಾರೆ. ಇಬ್ಬರನ್ನು ಮಾವೆಲಿಕ್ಕರದ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜಪಡಿಸಲಾಗಿದ್ದು, ತನಿಖೆ ಮುಂದುವರಿದಿದೆ.