ನವದೆಹಲಿ: ಈ ಬಾರಿಯ ಸರಕು ಮತ್ತು ಸೇವಾ ತೆರಿಗೆ(GST)ಮಂಡಳಿ ಸಭೆಯಲ್ಲಿ ಯಾವುದೇ ವಸ್ತುವಿನ ಮೇಲೆ ತೆರಿಗೆ ಹೆಚ್ಚಳದ ನಿರ್ಧಾರ ಕೈಗೊಂಡಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಹೇಳಿದ್ದಾರೆ.
ಶನಿವಾರ ನಡೆದ 48ನೇ ಜಿಎಸ್‌ಟಿ ಕೌನ್ಸಿಲ್ ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ನಿರ್ಮಲಾ ಸೀತಾರಾಮನ್ ಅವರು, ಸಮಯದ ಕೊರತೆಯಿಂದಾಗಿ 15 ಅಜೆಂಡಾಗಳಲ್ಲಿ 8 ಅಂಶಗಳ ಬಗ್ಗೆ ಮಾತ್ರ ಕೌನ್ಸಿಲ್ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಯಾವುದೇ ಹೊಸ ತೆರಿಗೆಗಳನ್ನು ವಿಧಿಸಿಲ್ಲ ಎಂದು ಹೇಳಿದರು.
ಜಿಎಸ್‌ಟಿ ಅಪರಾಧಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಮಾತ್ರ ಸ್ವಲ್ಪ ಬದಲಾವಣೆ ಮಾಡಲಾಗಿದೆ. ತಂಬಾಕು ಮತ್ತು ಗುಟ್ಖಾ ಮೇಲಿನ ತೆರಿಗೆ ಬಗ್ಗೆ ಚರ್ಚಿಸಲು ಸಮಯದ ಅಭಾವದ ಕಾರಣ ಈ ಸಭೆಯಲ್ಲಿ ಸಾಧ್ಯವಾಗಿಲ್ಲ. ಮುಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
ಜಿಎಸ್‌ಟಿ ಕಾನೂನಿನ ಅಡಿಯಲ್ಲಿ ಅಪರಾಧವೆಂದು ಪರಿಗಣಿಸಲಾಗಿರುವ ಕೆಲವು ನಿಯಮಗಳಲ್ಲಿ ತುಸು ಸಡಿಲಿಕೆ ಮಾಡಲಾಗಿದೆ. ನಕಲಿ ಇನ್ವಾಯ್ಸ್ ಸಲ್ಲಿಸುವುದನ್ನು ಹೊರತುಪಡಿಸಿದಂತೆ ಇತರ ಅಪರಾಧಗಳ ಮೇಲಿನ ಕಾನೂನು ಕ್ರಮ ಕೈಗೊಳ್ಳುವ ಮಿತಿಯನ್ನು 1 ಕೋಟಿ ರೂ.ನಿಂದ 2 ಕೋಟಿ ರೂ.ಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು.
ಪಶು ಆಹಾರ ತಯಾರಿಕಾ ವಲಯದ ಬೇಡಿಕೆ ಗಮನದಲ್ಲಿಟ್ಟುಕೊಂಡು ಬೇಳೆಕಾಳುಗಳ ಸಿಪ್ಪೆಯ ಮೇಲೆ ವಿಧಿಸಲಾಗುತ್ತಿದ್ದ ಶೇಕಡಾ 5ರಷ್ಟು ಜಿಎಸ್ಟಿಯನ್ನು ರದ್ದುಪಡಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.