ಗುವಾಹಟಿ: ದೇಶ ಸ್ವಾತಂತ್ರ್ಯಗೊಂಡು 75 ವರ್ಷ ಕಳೆಯುತ್ತಾ ಬಂದಿದ್ದರೂ ಇಂದಿಗೂ ಎಷ್ಟೋ ಹಳ್ಳಿಗಳು ರಸ್ತೆ, ಆರೋಗ್ಯ, ಶಿಕ್ಷಣದಂತಹ ಮೂಲಭೂತ ಸೌಕರ್ಯಗಳಿಲ್ಲದೆ ನರಳುತ್ತಿವೆ. ಅರುಣಾಚಲ ಪ್ರದೇಶದ ಚಾಂಗ್ ಲಾಂಗ್ ಜಿಲ್ಲೆಯ ಕುಗ್ರಾಮವೊಂದರ ಜನರು ಇದೇ ರೀತಿ ಮೊದಲ ಬಾರಿಗೆ ವೈದ್ಯರ ಮುಖವನ್ನು ನೋಡಿದ್ದಾರೆ.
ಹೌದು ಇದು ಆಚ್ಚರಿಯಾದರೂ ಸತ್ಯ. ಮಾಯಾನ್ಮಾರ್ ಗಡಿಯಲ್ಲಿರುವ ವಿಜಯನಗರ ಸರ್ಕಲ್ ನ ಗಾಂಧಿಗ್ರಾಮ ಸಂಪರ್ಕ ಕಡಿತಗೊಂಡು ದಶಕಗಳಿಂದಲೂ ಹೊರ ಜಗತ್ತಿನಿಂದ ಪ್ರತ್ಯೇಕವಾಗಿತ್ತು. ಇಲ್ಲಿ ಶನಿವಾರ 60 25 ವೈದ್ಯರು ಸೇರಿದಂತೆ 60 ವೈದ್ಯಕೀಯ ಸಿಬ್ಬಂದಿಯಿಂದ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು.
ಈ ಗ್ರಾಮಕ್ಕೆ ಮೊದಲು ಹೆಲಿಕಾಪ್ಟರ್ ಮೂಲಕ ಮಾತ್ರ ತೆರಳಬೇಕಾಗಿತ್ತು. ಇದೀಗ ಮೈಯಾ ಪಟ್ಟಣದ ಬಳಿಯಿಂದ ವಿಜಯನಗರವರೆಗೂ 157 ಕಿ. ಮೀ. ರಸ್ತೆಯಿದೆ. ಇದು ನಂದಾಪ ರಾಷ್ಟ್ರೀಯ ಪಾರ್ಕ್ ಮತ್ತು ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಮೂಲಕ ಹಾದು ಹೋಗುತ್ತದೆ. ಇದು ಆರೋಗ್ಯ ಶಿಬಿರ ಮಾತ್ರವಲ್ಲ, ಮನೆ ಬಾಗಿಲಿಗೆ ಆಸ್ಪತ್ರೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಸುನ್ನಿ ಕೆ ಸಿಂಗ್ ತಿಳಿಸಿದರು.
ಇಸಿಜಿ, ಅಲ್ಟ್ರಾಸೌಂಡ್ ಸ್ಕ್ಯಾನ್, ರಕ್ತ ಪರೀಕ್ಷೆ ಸಲಕರಣೆಗಳೊಂದಿಗೆ ತಂಡ ಆರೋಗ್ಯ ತಪಾಸಣೆ ನಡೆಸಿದೆ. ಕೆಲವೊಂದು ಚಿಕ್ಕದಾದ ಶಸ್ತ್ರ ಚಿಕಿತ್ಸೆ ಕೂಡಾ ಮಾಡಲಾಗಿದೆ. ಅನೇಕ ವೈದ್ಯರು ಒಗ್ಗಟ್ಟಾಗಿ ಬಂದ್ದರಿಂದ ಗ್ರಾಮಸ್ಥರು ಅತೀವ ಸಂತಸ ವ್ಯಕ್ತಪಡಿಸಿದರು. ಕೆಲವರಿಗೆ ಆರೋಗ್ಯ ಸೇವೆ ಸಿಗುತ್ತಿರಲಿಲ್ಲ. ಅಂತಹವರು ಮೊದಲ ಬಾರಿಗೆ ವೈದ್ಯರನ್ನು ನೋಡಿದ್ದಾರೆ ಎಂದು ಸಿಂಗ್ ಹೇಳಿದರು.
ಗಾಂಧಿಗ್ರಾಮ ಮಿಯಾವೊ ಉಪ ಆರೋಗ್ಯ ಕೇಂದ್ರದಿಂದ 135 ಕಿ.ಮೀ. ದೂರದಲ್ಲಿದೆ. ಕೆಲವೇ ಗ್ರಾಮಸ್ಥರು ಮಾತ್ರ ಅಲ್ಲಿಗೆ ಹೋಗುತ್ತಾರೆ. ಅವರನ್ನು ನರ್ಸ್ ತಪಾಸಣೆ ನಡೆಸಿ, ಚಿಕಿತ್ಸೆ ನೀಡುತ್ತಾರೆ. ಗಾಂಧಿಗ್ರಾಮದಿಂದ 22 ಕಿ.ಮೀ ವಿಜಯನಗರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಬ್ಬರೇ ವೈದ್ಯರಿದ್ದು, ಎಲ್ಲಾ ಸಮಯದಲ್ಲೂ ಇರುವುದಿಲ್ಲ. ಭಾನುವಾರ ಎರಡನೇ ಬಾರಿಗೆ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಈ ಎರಡು ಆರೋಗ್ಯ ತಪಾಸಣೆಗಾಗಿ ರಾಜ್ಯ ಸರ್ಕಾರದಿಂದ ರೂ. 10 ಲಕ್ಷ ಮೊತ್ತದಲ್ಲಿ ಔಷಧಿಗಳನ್ನು ಖರೀದಿಸಿತ್ತು.