ನವದೆಹಲಿ: ಮುಸ್ಲಿಂಯೇತರ ಮಕ್ಕಳನ್ನು ದಾಖಲಿಸಿಕೊಳ್ಳುತ್ತಿರುವ ಸರ್ಕಾರಿ ಅನುದಾನಿತ ಮತ್ತು ನೋಂದಾಯಿತ ಮದರಸಾಗಳನ್ನು ವಿಚಾರಣೆಗೆ ಒಳಪಡಿಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.
ಎನ್‌ಸಿಪಿಸಿಆರ್ ಅಧ್ಯಕ್ಷ ಪ್ರಿಯಾಂಕ್ ಕಾನೂನ್‌ಗೋ ಅವರು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ, ಮುಸ್ಲಿಂಯೇತರ ಸಮುದಾಯಗಳಿಗೆ ಸೇರಿದ ಮಕ್ಕಳು ಸರ್ಕಾರಿ ಅನುದಾನಿತ ಅಥವಾ ಮಾನ್ಯತೆ ಪಡೆದ ಮದರಸಾಗಳಲ್ಲಿ ಪ್ರವೇಶ ಪಡೆಯುತ್ತಿದ್ದು, ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅಂತಹ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನೂ ನೀಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ.
'ಮುಸ್ಲಿಂಯೇತರ ಮಕ್ಕಳನ್ನು ದಾಖಲಿಸಿಕೊಂಡಿರುವ ಮದರಸಾಗಳಿಗೆ ಖುದ್ದು ಭೇಟಿ ನೀಡಿ ವಿಚಾರಣೆ ನಡೆಸಬೇಕು. ವಿಚಾರಣೆಯ ನಂತರ ಅಂತಹ ಎಲ್ಲ ಮಕ್ಕಳನ್ನು ಔಪಚಾರಿಕ ಶಿಕ್ಷಣ ಪಡೆಯಲು ಶಾಲೆಗಳಿಗೆ ದಾಖಲಿಸಬೇಕು' ಎಂದು ಅವರು ಪತ್ರದಲ್ಲಿ ಸೂಚಿಸಿದ್ದಾರೆ.
'ಪೋಷಕರ ಒಪ್ಪಿಗೆ ಇಲ್ಲದೆ, ಮಕ್ಕಳಿಗೆ ಯಾವುದೇ ಧಾರ್ಮಿಕ ಶಿಕ್ಷಣವನ್ನು ಶಿಕ್ಷಣ ಸಂಸ್ಥೆಗಳು ಬೋಧಿಸುವುದಕ್ಕೆ ಸಂವಿಧಾನದ ವಿಧಿ 28(3)ರಲ್ಲಿ ನಿರ್ಬಂಧವಿದೆ. ಆದರೆ, ಮದರಸಾಗಳ ಈ ನಡೆ ಸಂವಿಧಾನದ ಸ್ಪಷ್ಟ ಉಲ್ಲಂಘನೆ' ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ಮದರಸಾದಂತಹ ಸಂಸ್ಥೆಗಳು ಮುಖ್ಯವಾಗಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುವ ಜವಾಬ್ದಾರಿ ಹೊಂದಿವೆ. ಸರ್ಕಾರದ ಧನಸಹಾಯ ಅಥವಾ ಮಾನ್ಯತೆ ಪಡೆದ ಮದರಸಾಗಳು ಧಾರ್ಮಿಕ ಶಿಕ್ಷಣ ಮತ್ತು ಸ್ವಲ್ಪ ಮಟ್ಟಿಗೆ ಔಪಚಾರಿಕ ಶಿಕ್ಷಣವನ್ನು ಮಕ್ಕಳಿಗೆ ನೀಡುತ್ತಿವೆ.
ಈ ಸಂಗತಿಗಳ ದೃಷ್ಟಿಯಿಂದ ಸರ್ಕಾರಿ ಅನುದಾನಿತ ಮತ್ತು ಸರ್ಕಾರಿ ಮಾನ್ಯತೆ ಹೊಂದಿರುವ ಎಲ್ಲ ಮದರಸಾಗಳನ್ನು ಸಮಗ್ರ ವಿಚಾರಣೆಗೆ ಒಳಪಡಿಸಲು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆಯೋಗವು ಶಿಫಾರಸು ಮಾಡಿರುವುದಾಗಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.