ನವದೆಹಲಿ: ಚುನಾವಣಾ ಸಮೀಕ್ಷೆಗಳನ್ನು ನಿಷೇಧಿಸುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಶುಕ್ರವಾರ ಲೋಕಸಭೆಗೆ ತಿಳಿಸಲಾಯಿತು.
ಚುನಾವಣೆ ಘೋಷಣೆ ಮತ್ತು ಮಾದರಿ ನೀತಿ ಸಂಹಿತೆ ಜಾರಿ ನಂತರ ಫಲಿತಾಂಶ ಪ್ರಕಟವಾಗುವವರೆಗೆ ಅಭಿಪ್ರಾಯ ಮತ್ತು ಚುನಾವಣೋತ್ತರ ಸಮೀಕ್ಷೆಗೆ ನಿಷೇಧ ಹೇರಲು ಸರ್ಕಾರ ಚಿಂತನೆ ನಡೆಸುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಕಿರಣ್ ರಿಜಿಜು, ಯಾವುದೇ ಸಮೀಕ್ಷೆ ನಿಷೇಧಿಸುವ ಪ್ರಸ್ತಾವ ಪರಿಗಣನೆಯಲ್ಲಿ ಇಲ್ಲ ಎಂದರು.
ಚುನಾವಣಾ ವೇಳಾಪಟ್ಟಿ ಪ್ರಕಟಣೆ ಮತ್ತು ಅಂತಿಮ ಹಂತದ ಮತದಾನದ ನಡುವೆ ಜನಾಭಿಪ್ರಾಯ ಸಮೀಕ್ಷೆಗಳ ಪ್ರಕಟಣೆ ಮತ್ತು ಪ್ರಸಾರವನ್ನು ನಿಷೇಧಿಸಬೇಕೆಂದು ಚುನಾವಣಾ ಆಯೋಗವು ಒತ್ತಾಯಿಸಿತ್ತು.
ಪ್ರಸ್ತುತ ಇರುವ ಕಾನೂನು ಮತದಾನಕ್ಕೆ ಕೇವಲ 48 ಗಂಟೆಗಳ ಮೊದಲು ಅವುಗಳನ್ನು ನಿಷೇಧಿಸಲು ಚುನಾವಣಾ ಆಯೋಗಕ್ಕೆ ಅನುಮತಿ ಇದೆ.
ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು, ಮತದಾನ ಕೊನೆಗೊಂಡ ಅರ್ಧ ಗಂಟೆ ನಂತರದ ವರೆಗೆ ಮತಗಟ್ಟೆ ಸಮೀಕ್ಷೆ ಫಲಿತಾಂಶ ಪ್ರಕಟಿಸುವುದಕ್ಕೆ ನಿರ್ಬಂಧವಿದೆ ಎಂದು ರಿಜಿಜು ಹೇಳಿದರು.