ಕೋಟಯಂ : ಕೇರಳದ ಕೋಟಯಂ ಜಿಲ್ಲೆಯ ಎರಡು ಹಳ್ಳಿಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ಏಕಾಏಕಿ ಉಲ್ಬಣಿಸಿದ್ದು, ರೋಗ ವ್ಯಾಪಕವಾಗಿ ಹರಡದಂತೆ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ನೂರಾರು ಕೋಳಿಗಳನ್ನು ಸಂಹರಿಸಲಾಗಿದೆ ಎಂದು ಸ್ಥಳೀಯ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.
ಕೋಟಯಂ ಜಿಲ್ಲೆಯ ಎರಡು ಹಳ್ಳಿಗಳಲ್ಲಿ ಬ್ರಾಯ್ಲರ್ ಕೋಳಿಗಳಲ್ಲಿ ಕಳೆದ ವಾರ ಜ್ವರ ಕಾಣಿಸಿತ್ತು. ಇದರಿಂದಾಗಿ ನೂರಾರು ಸಂಖ್ಯೆಯಲ್ಲಿ ಬಾತುಕೋಳಿಗಳು ಮತ್ತು ಇತರ ಸಾಕು ಪಕ್ಷಿಗಳನ್ನು ಹಿಡಿದು ಕೊಲ್ಲಲಾಗಿದೆ ಎಂದು ಜಿಲ್ಲಾ ಪಶು ವೈದ್ಯರು ತಿಳಿಸಿದ್ದಾರೆ.
ಕಳೆದ ಭಾನುವಾರ ರೈತರು, ಕೊಳಗಳಲ್ಲಿ ಬಾತುಕೋಳಿಗಳನ್ನು ಹಿಡಿದು ಆರೋಗ್ಯ ಅಧಿಕಾರಿಗಳ ಕೈಗೆ ಒಪ್ಪಿಸುತ್ತಿದ್ದುದು, ಆ ಕೋಳಿಗಳನ್ನು ನಾಶಪಡಿಸಲು ಗೊತ್ತುಪಡಿಸಿದ್ದ ಪ್ರದೇಶಕ್ಕೆ ಸಾಗಿಸುವುದು ಕಂಡುಬಂತು.
'ಸೋಂಕು ಕಾಣಿಸಿದ ಕೊಳಗಳ ಸುತ್ತ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಕೋಳಿಗಳು ಮತ್ತು ವಿವಿಧ ಸಾಕು ಪಕ್ಷಿಗಳನ್ನು ಕೊಲ್ಲುವ ಕಾರ್ಯಾಚರಣೆ ಪ್ರಾರಂಭಿಸಿದ್ದೇವೆ' ಎಂದು ಕೋಟಯಂನ ಪಶು ವೈದ್ಯಕೀಯ ಇಲಾಖೆ ಮುಖ್ಯಸ್ಥ ಶಜಿ ಪಣಿಕರ್ ಸೋಮವಾರ ತಿಳಿಸಿದರು.
ಹಕ್ಕಿ ಜ್ವರ ಹರಡುವಿಕೆಯು ಕೋಳಿಗಳ ಮಾರಣಹೋಮಕ್ಕೆ ಕಾರಣವಾಗಬಹುದು. ಇದು ಮನುಷ್ಯರಿಗೂ ಹರಡುವ ಅಪಾಯವಿದ್ದು, ವ್ಯಾಪಾರಕ್ಕೂ ನಿರ್ಬಂಧ ಬೀಳುವ ಸಾಧ್ಯತೆ ಇದೆ. ಇದು ಈಗ ಕುಕ್ಕುಟ ಉದ್ಯಮ ಮತ್ತು ಸರ್ಕಾರಕ್ಕೂ ಆತಂಕ ತಂದೊಡ್ಡಿದೆ.