ತಿರುವನಂತಪುರ: ಕೇರಳದಲ್ಲಿ 2018ರಲ್ಲಿ ಲಾತ್ವಿಯಾ (Latvia)ಮೂಲದ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದಿದ್ದಕ್ಕಾಗಿ ತಿರುವನಂತಪುರ(Thiruvananthapuram)ದ ನ್ಯಾಯಾಲಯವು ಮಂಗಳವಾರ ಇಬ್ಬರಿಗೆ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದೆ.
ದೋಷಿಗಳಾದ ಉಮೇಶ(Umesh) ಮತ್ತು ಉದಯಕುಮಾರ(Udayakumar) ಅವರಿಗೆ ತಲಾ 1.65 ಲ.ರೂ.ಗಳ ದಂಡವನ್ನೂ ನ್ಯಾಯಾಲಯವು ವಿಧಿಸಿದೆ.
ನಾಪತ್ತೆಯಾಗಿದ್ದಾಳೆ ಎನ್ನಲಾಗಿದ್ದ 32ರ ಹರೆಯದ ಮಹಿಳೆಯ ಕೊಳೆತ ಶವವು ಸುಮಾರು ಒಂದು ತಿಂಗಳ ಬಳಿಕ ಕೋವಲಂ ನಗರದ ಸಮೀಪದಲ್ಲಿಯ ಮ್ಯಾಂಗ್ರೋವ್ ಕಾಡಿನಲ್ಲಿ ಪತ್ತೆಯಾಗಿತ್ತು. ಮಹಿಳೆ,ಆಕೆಯ ಸಂಗಾತಿ ಮತ್ತು ಸೋದರಿ ತಿರುವನಂತಪುರ ಸಮೀಪದ ಆರೋಗ್ಯ ಕೇಂದ್ರವೊಂದರಲ್ಲಿ ಆಯುರ್ವೇದ ಚಿಕಿತ್ಸೆಯನ್ನು ಪಡೆಯಲು ಭಾರತಕ್ಕೆ ಆಗಮಿಸಿದ್ದರು.
ಮೃತದೇಹ ಪತ್ತೆಯಾದ ಒಂದು ತಿಂಗಳ ಬಳಿಕ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ಅವರು ಮಹಿಳೆಯ ಅತ್ಯಾಚಾರ ಮತ್ತು ಹತ್ಯೆಗೆ ಮುನ್ನ ಆಕೆಗೆ ಮಾದಕ ದ್ರವ್ಯಗಳನ್ನು ನೀಡಿದ್ದರು ಎಂದು ಆರೋಪಿಸಿದ್ದರು. ಉಮೇಶ ಮತ್ತು ಉದಯಕುಮಾರ ರೂಢಿಗತ ಅಪರಾಧಿಗಳಾಗಿದ್ದು,ಹಲವಾರು ಮಾದಕ ದ್ರವ್ಯ ಮತ್ತು ಹಲ್ಲೆ ಸಂಬಂಧಿತ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಹೇಳಿದ್ದರು.
ತೀರ್ಪು ಹೊರಬಿದ್ದ ಬಳಿಕ ದೋಷಿಗಳು ತಮ್ಮ ಅಮಾಯಕತೆಯನ್ನು ಸಾಬೀತುಗೊಳಿಸಲು ತಮ್ಮನ್ನು ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು. ಲಾತ್ವಿಯಾ ಮಹಿಳೆಯ ಕೊಲೆ ನಡೆದಿದ್ದ ದಿನ ಯೋಗಗುರು ಓರ್ವ ಅಪರಾಧ ಸ್ಥಳದಿಂದ ಓಡಿ ಹೋಗುತ್ತಿದ್ದನ್ನು ತಾವು ನೋಡಿದ್ದಾಗಿ ತಿಳಿಸಿದ ಅವರು,ಮೃತ ಶರೀರದ ಬಳಿ ಲಭಿಸಿದ್ದ ಕೂದಲಿನ ಎಳೆಗಳ ಬಗ್ಗೆ ಪೊಲೀಸರು ತನಿಖೆ ನಡೆಸಿಲ್ಲ ಎಂದು ಆರೋಪಿಸಿದರು.
ಅಧಿಕಾರಿಗಳು ತನಿಖೆಯ ಸಂದರ್ಭದಲ್ಲಿ ಈ ಆರೋಪಗಳನ್ನು ತಳ್ಳಿ ಹಾಕಿದ್ದಾರೆ ಎಂದು ಎಸಿಪಿ ಜೆ.ಕೆ.ದಿನಿಲ್ (JK Dinil)ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಕೊಲೆಯಾಗಿದ್ದ ಮಹಿಳೆಯ ಸೋದರಿ ಆಕೆಗಾಗಿ ಹುಡುಕಾಟವನ್ನು ಆರಂಭಿಸಿದ ಬಳಿಕ ಪ್ರಕರಣವು ಮಾಧ್ಯಮಗಳ ಗಮನ ಸೆಳೆದಿತ್ತು. ಪೊಲೀಸ್ ದೂರನ್ನು ದಾಖಲಿಸಿದ ಬಳಿಕ ಆಕೆ ತನ್ನ ಸೋದರಿಯನ್ನು ಪತ್ತೆ ಹಚ್ಚಲು ಹಲವಾರು ತಾಣಗಳು ಮತ್ತು ಮನೆಗಳಿಗೆ ಭೇಟಿ ನೀಡಿದ್ದಳು. ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್ಗಳನ್ನು ಅಂಟಿಸಿದ್ದಲ್ಲದೆ,ಸೋದರಿಯ ಕುರಿತು ಮಾಹಿತಿಗಾಗಿ ಬಹುಮಾನವನ್ನೂ ಘೋಷಿಸಿದ್ದಳು.