ಲಂಡನ್ ಸುಮಾರು 2,500 ವರ್ಷ ಹಳೆಯದಾದ, ಸಂಸ್ಕೃತ ಭಾಷೆಯ ವ್ಯಾಕರಣಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಭಾರತದ ಪಿಎಚ್.ಡಿ ವಿದ್ಯಾರ್ಥಿಯೊಬ್ಬರು ಈಗ ಬಗೆಹರಿಸಿದ್ದಾರೆ.
ಸಂಸ್ಕೃತ ಭಾಷಾತಜ್ಞರಿಗೆ 5ನೇ ಶತಮಾನದಿಂದಲೂ ಇದು ಸವಾಲಾಗಿತ್ತು ಎನ್ನಲಾಗಿದೆ.
ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಅಧ್ಯಯನ ಕೈಗೊಂಡಿರುವ ರಿಷಿ ರಾಜ್‌ಪೋಪಟ್ ಈ ಸಾಧನೆ ಮಾಡಿದ್ದಾರೆ. ವ್ಯಾಕರಣದ ಈ ಸಮಸ್ಯೆಗೆ ರಿಷಿ ಅವರು ಕಂಡುಹಿಡಿದ ಪರಿಹಾರವನ್ನು ಒಳಗೊಂಡಿರುವ ಈ ಪ್ರೌಢಪ್ರಬಂಧವನ್ನು ಪ್ರಕಟಿಸಲಾಗಿದೆ.
ಪಾಣಿನಿ ಸಂಸ್ಕೃತ ಪಂಡಿತ. ವ್ಯಾಕರಣಕ್ಕೆ ಮೂಲಾಧಾರವಾದ ಸೂತ್ರಗಳನ್ನು ಕುರಿತ ಇವರ ಗ್ರಂಥ 'ಅಷ್ಟಾಧ್ಯಾಯಿ'ಯಲ್ಲಿನ ಸಮಸ್ಯೆಗಳಿಗೆ ರಿಷಿ ಈಗ ಪರಿಹಾರ ಹುಡುಕಿದ್ದಾರೆ. ಈಗ ಪಾಣಿನಿ ಸೂತ್ರಗಳನ್ನು ಕೂಡ ಕಂಪ್ಯೂಟರ್‌ನಲ್ಲಿ ಅಳವಡಿಸಬಹುದಾಗಿದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.
'ಪ್ರಮುಖ ಸಂಸ್ಕೃತ ವಿದ್ವಾಂಸರು ರಿಷಿ ಅವರ ಸಂಶೋಧನೆಯನ್ನು ಕ್ರಾಂತಿಕಾರಕ ಎಂದು ಬಣ್ಣಿಸಿದ್ದಾರೆ' ಎಂದೂ ವಿ.ವಿ ಹೇಳಿದೆ. 'ನನ್ನ ಪಾಲಿಗೆ ಅದು ಅವಿಸ್ಮರಣೀಯ ಕ್ಷಣವಾಗಿತ್ತು' ಎಂದು 27 ವರ್ಷದ ರಿಷಿ ಪ್ರತಿಕ್ರಿಯಿಸಿದ್ದಾರೆ. ಪ್ರಾಚೀನ ಭಾಷೆಯಾದ ಸಂಸ್ಕೃತ ಸದ್ಯ ಭಾರತದಲ್ಲಿ ಮಾತ್ರ ಬಳಕೆಯಲ್ಲಿದೆ. ಸುಮಾರು 25 ಸಾವಿರ ಜನರು ಬಳಸುತ್ತಿದ್ದಾರೆ ಎನ್ನಲಾಗಿದೆ. ವಿಶ್ವದಾದ್ಯಂತ ಹಲವು ಭಾಷೆ, ಸಂಸ್ಕೃತಿಯ ಮೇಲೆ ಇದರ ಪ್ರಭಾವವಿದೆ.