ಕೊಚ್ಚಿ: ಕೇರಳದ ಕೊಚ್ಚಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಹೊಸವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಸಿದ್ಧತೆಗಳು ನಡೆದಿವೆ. ಕೊಚ್ಚಿ ಕಾರ್ನಿವಲ್‌ಗೆ ಸಿದ್ಧತೆಯ ಭಾಗವಾಗಿ ತಲೆಯೆತ್ತಿರುವ ಬೃಹತ್ ಪ್ರತಿಕೃತಿ ಈ ಬಾರಿ ವಿವಾದಕ್ಕೀಡಾಗಿದೆ.
ಈ ಪ್ರತಿಕೃತಿಯು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೋಲುತ್ತಿದೆ ಎಂದು ಹೇಳಿ ಬಿಜೆಪಿ ತನ್ನ ಆಕ್ಷೇಪ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.
ಹೊಸ ವರ್ಷದ ಆಚರಣೆ ಭಾಗವಾಗಿ ಹೊಸ ವರ್ಷ ಆಗಮನದ ಮುನ್ನ ಈ ಪ್ರತಿಕೃತಿಯನ್ನು ಸುಡಲಾಗುತ್ತದೆ.
ಆದರೆ ಈ ಬಾರಿ ಬಿಜೆಪಿಯ ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ ಪ್ರತಿಕೃತಿ ಸಂಬಂಧಿತ ಕೆಲಸ ಸ್ಥಗಿತಗೊಂಡಿತ್ತು. ನಂತರ ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿ ಆಯೋಜಕರು ಪ್ರತಿಕೃತಿ ಮುಖದಲ್ಲಿ ಬದಲಾವಣೆ ಮಾಡಲು ಒಪ್ಪಿದ ನಂತರ ಬಿಜೆಪಿ ತನ್ನ ಪ್ರತಿಭಟನೆ ವಾಪಸ್ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.