ನವದೆಹಲಿ: ಇತ್ತೀಚಿನ ದಿನಗಳಲ್ಲಿ ದಡಾರ ಏಕಾಏಕಿಯಾಗಿ ಮಕ್ಕಳಲ್ಲಿ ಹರಡುತ್ತಿದೆ. ಕೆಲವು ಭಾರತೀಯ ರಾಜ್ಯಗಳಲ್ಲಿ ದಡಾರ ಭಾರಿ ಸಂಖ್ಯೆಯಲ್ಲಿ ಹರಡುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ (WHO), ಒಂದು ಪ್ರಕರಣದಿಂದ 12 ರಿಂದ 18 ಜನರಿಗೆ ಸೋಂಕು ರವಾನೆ ಆಗಬಲ್ಲದು ಎಂದು ಹೇಳಿದೆ.
ದಿನವೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜ್ವರ ಮತ್ತು ದದ್ದುಗಳ ಮೇಲೆ ಕಣ್ಗಾವಲು ಇಡಲು ಕೇಂದ್ರ ಸರ್ಕಾರ, ಪೀಡಿತ ರಾಜ್ಯಗಳಿಗೆ ನಿರ್ದೇಶನ ಮಾಡಿದೆ. ಇದರಿಂದಾಗಿ ಪ್ರಕರಣಗಳು ಬೆಳಕಿಗೆ ಬಂದು ತಕ್ಷಣ ಸೂಕ್ತ ಚಿಕಿತ್ಸೆ ನೀಡಲು ಸಹಾಯ ಆಗುತ್ತದೆ. ಇದರಿಂದ ಅನೇಕರ ಪ್ರಾಣವೂ ಉಳಿಯಬಹುದು.
ಮಹಾರಾಷ್ಟ್ರ ಮತ್ತು ಕೇರಳದಲ್ಲಿ ದಡಾರ ಪ್ರಕರಣಗಳು ಹೆಚ್ಚುತ್ತಿದ್ದು ಡಿ.3 ರಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ ಮಹಾರಾಷ್ಟ್ರದಲ್ಲಿ ಇದುವರೆಗೆ 807 ದಡಾರ ಪ್ರಕರಣಗಳು ಮತ್ತು ದಡಾರದಿಂದಾಗಿ 18 ಸಾವುಗಳು ಸಂಭವಿಸಿವೆ. ಅವುಗಳಲ್ಲಿ ಹೆಚ್ಚಿನವು ಮುಂಬೈ ನಗರ ಭಾಗದಲ್ಲಿ ಕಂಡುಬಂದಿವೆ. ಮೊನ್ನೆ ನ.28 ರಂದು ಮುಂಬೈನಲ್ಲಿ ದಡಾರದಿಂದ ಒಂದು ವರ್ಷದ ಬಾಲಕಿ ಸಾವನ್ನಪ್ಪಿದ್ದಳು.
ನ.30 ರಂದು ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ 160 ದಡಾರ ಪ್ರಕರಣಗಳು ವರದಿಯಾಗಿವೆ. ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಶಿಯನ್ಸ್ ಈ ಪ್ರಕರಣಗಳಲ್ಲಿ ಆತಂಕಕಾರಿ ಹೆಚ್ಚಳದ ಹಿನ್ನೆಲೆ ಲಸಿಕೆ ನೀಡಲು ಮನವಿ ಮಾಡಿತ್ತು. ಕೇರಳದ ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್‌ನ ರಾಜ್ಯ ಅಧ್ಯಕ್ಷ ಡಾ ಜೋಸ್ ಔಸೆಫ್ 'ಜಿಲ್ಲೆಯಲ್ಲಿ ಇದುವರೆಗೆ ದಡಾರದಿಂದ ಯಾವುದೇ ಸಾವು ಸಂಭವಿಸಿಲ್ಲ. ಈ 2 ರಾಜ್ಯಗಳಲ್ಲದೆ ಬಿಹಾರ, ಗುಜರಾತ್, ಹರಿಯಾಣ, ಜಾರ್ಖಂಡ್‌ನಲ್ಲಿಯೂ ದಡಾರ ಪ್ರಕರಣಗಳು ವರದಿಯಾಗಿವೆ' ಎಂದು ಮಾಹಿತಿ ನೀಡಿದ್ದಾರೆ.
ದಡಾರದ ಲಕ್ಷಣಗಳು ಯಾವುವು ಗೊತ್ತಾ?
ದಡಾರ ವೈರಸ್‌ನ ಸಾಮಾನ್ಯ ಲಕ್ಷಣಗಳೆಂದರೆ ಅಧಿಕ ಜ್ವರ, ಸುಸ್ತು, ತೀವ್ರ ಕೆಮ್ಮು, ಕೆಂಪು ಕಣ್ಣುಗಳು ಮತ್ತು ಸ್ರವಿಸುವ ಮೂಗು. ಇದು ದೇಹದ ಮೇಲೆ ಕೆಂಪು ದದ್ದುಗಳನ್ನು ಉಂಟುಮಾಡಬಹುದು. ಅದು ತಲೆಯಿಂದ ಪ್ರಾರಂಭವಾಗಿ ನಂತರ ದೇಹದ ಇತರ ಭಾಗಗಳಿಗೆ ಹರಡುತ್ತದೆ. ನೋಯುತ್ತಿರುವ ಗಂಟಲು, ಬಾಯಿಯಲ್ಲಿ ಬಿಳಿ ಚುಕ್ಕೆಗಳು, ಸ್ನಾಯು ನೋವು ಇತ್ಯಾದಿ ಇತರ ರೋಗಲಕ್ಷಣಗಳು. ಆರೋಗ್ಯ ಸಚಿವಾಲಯದ ಪ್ರಕಾರ, ಈ ರೋಗ ವಾರ್ಷಿಕವಾಗಿ ನವೆಂಬರ್‌ನಿಂದ ಮಾರ್ಚ್ ಅವಧಿಯಲ್ಲಿ ಹೆಚ್ಚಾಗುತ್ತದೆ.
ದಡಾರ ಉಲ್ಬಣಕ್ಕೆ ಕಾರಣ?
ಅಧಿಕೃತ ಮೂಲಗಳ ಪ್ರಕಾರ, ಕಳೆದ ಕೆಲವು ವರ್ಷಗಳಲ್ಲಿ ದಡಾರ ಕಾಯಿಲೆಗೆ ವ್ಯಾಕ್ಸಿನೇಷನ್ನಲ್ಲಿ ಭಾರಿ ಕುಸಿತ ಕಂಡುಬಂದಿದೆ. ಇದರಿಂದಾಗಿ ಅನೇಕ ಮಕ್ಕಳು ವೈರಸ್‌ನಿಂದ ಸಂಪೂರ್ಣವಾಗಿ ಅಸುರಕ್ಷಿತರಾಗಿದ್ದಾರೆ. ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಪಿ ಅಶೋಕ್ ಬಾಬು 'ರೋಗ ಉಲ್ಬಣವಾಗಿರುವ ಪ್ರದೇಶಗಳಲ್ಲಿ ಮಕ್ಕಳಿಗೆ ಈ ರೋಗಕ್ಕೆ ಲಸಿಕೆ ನೀಡಲಾಗಿಲ್ಲ. ಅದಲ್ಲದೇ ಈ ಪ್ರದೇಶಗಳಲ್ಲಿ ಅರ್ಹ ಫಲಾನುಭವಿಗಳಿಗೆ ನೀಡಲಾಗಿರುವ ದಡಾರ ಮತ್ತು ರುಬೆಲ್ಲಾ ಲಸಿಕೆ (ಎಂಆರ್‌ಸಿವಿ) ದೇಶದ ಸರಾಸರಿಗಿಂತ ಕಡಿಮೆಯಿದೆ.