ವ್ಯಾಟಿಕನ್ ಸಿಟಿ: 2013 ರಲ್ಲಿ ಮಧ್ಯಯುಗದ ನಂತರ ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೊದಲ ಧರ್ಮಗುರು, ಮಾಜಿ ಪೋಪ್ ಬೆನೆಡಿಕ್ಟ್ XVI ಅವರು ಶನಿವಾರ 95 ನೇ ವಯಸ್ಸಿನಲ್ಲಿ ನಿಧನರಾದರು ಎಂದು ವ್ಯಾಟಿಕನ್ ಘೋಷಿಸಿದೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬೆನೆಡಿಕ್ಟ್ XVI ಅವರು ವ್ಯಾಟಿಕನ್‌ನ ಮೇಟರ್ ಎಕ್ಲೆಸೀಯೆ ಮಾನಸ್ಟರಿಯಲ್ಲಿ ಇಂದು ಬೆಳಗ್ಗೆ 9.40ಕ್ಕೆ ನಿಧನರಾದರು ಎಂದು ದುಃಖದೊಂದಿಗೆ ನಿಮಗೆ ತಿಳಿಸುತ್ತಿದ್ದೇನೆ. ಹೆಚ್ಚಿನ ಮಾಹಿತಿಯನ್ನು ಸಾಧ್ಯವಾದಷ್ಟು ಬೇಗನೆ ನೀಡಲಾಗುವುದು" ಎಂದು ವ್ಯಾಟಿಕನ್ ವಕ್ತಾರ ಮ್ಯಾಟಿಯೊ ಬ್ರೂನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ರಾಂತ ಪೋಪ್ ಬೆನೆಡಿಕ್ಟ್ ಅವರ ಪಾರ್ಥಿವ ಶರೀರವನ್ನು ಜನವರಿ 2ರಿಂದ ಸೇಂಟ್ ಪೀಟರ್ಸ್ ಬೆಸಿಲಿಯಾದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುತ್ತದೆ ಎಂದು ವ್ಯಾಟಿಕನ್ ತಿಳಿಸಿದೆ.
ಜರ್ಮನಿಯವರಾದ ಪೋಪ್ ಎಮೆರಿಟಸ್ ಬೆನೆಡಿಕ್ಟ್ ಅವರ ಮೂಲ ಹೆಸರು ಜೋಸೆಫ್ ರಟ್ಜಿಂಗರ್ ಆಗಿದ್ದು, ಫೆಬ್ರವರಿ 2013 ರಲ್ಲಿ ಅನಾರೋಗ್ಯದ ಕಾರಣ ನೀಡಿ ಬೆನೆಡಿಕ್ಟ್ ಅವರು ಪೋಪ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಅವಧಿಯಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪವೂ ಕೇಳಿಬಂದಿತ್ತು.
ವಿವಾದಾತ್ಮಕ ಕ್ರೈಸ್ತ ಧರ್ಮ ಗುರುವಾಗಿದ್ದ ಮಾಜಿ ಪೋಪ್ ಬೆನೆಡಿಕ್ಟ್ ಅವರು ಅನೇಕ ಹಗರಣಗಳಲ್ಲಿ ಸಿಲುಕಿಕೊಂಡಿದ್ದರು. ಲೈಂಗಿಕ ದೌರ್ಜನ್ಯದ ಹಗರಣಗಳು, ದುರಾಡಳಿತದ ಆರೋಪಗಳು ಮತ್ತು ಸಂಪ್ರದಾಯವಾದಿಗಳು ಹಾಗೂ ಪ್ರಗತಿಪರರ ಧ್ರುವೀಕರಣದಂತಹ ಚಟುವಟಿಕೆಗಳಿಂದ ಟೀಕೆಗೆ ಗುರಿಯಾಗಿದ್ದರು.