ನವದೆಹಲಿ: ದೇಶದಲ್ಲಿರುವ ಶೇ.1 ರಷ್ಟು ಶ್ರೀಮಂತರು ದೇಶದ ಒಟ್ಟು ಸಂಪತ್ತಿನ ಶೇ.40 ರಷ್ಟನ್ನು ಹೊಂದಿದ್ದಾರೆ. ಜನಸಂಖ್ಯೆಯ ಕೆಳಗಿನ ಅರ್ಧದಷ್ಟು ಜನತೆ ಕೇವಲ ಶೇ.3 ರಷ್ಟು ಸಂಪತ್ತು ಹೊಂದಿದ್ದಾರೆ ಎಂದು ಹೊಸ ಅಧ್ಯಯನ ವರದಿಯೊಂದು ಹೇಳಿದೆ.
ಭಾರತದಲ್ಲಿನ ವಾರ್ಷಿಕ ಅಸಮಾನತೆ ವರದಿಯನ್ನು ಪ್ರಕಟಿಸಿರುವ ರೈಟ್ಸ್ ಗ್ರೂಪ್ ಆಪ್ಕ್ಸ್ ಫಾಮ್ ಇಂಟರ್ನ್ಯಾಷನಲ್, ಭಾರತದ 10 ಅತಿ ದೊಡ್ಡ ಶ್ರೀಮಂತರಿಗೆ ಶೇ.5 ರಷ್ಟು ತೆರಿಗೆ ವಿಧಿಸುವುದರಿಂದ ಮಕ್ಕಳನ್ನು ವಾಪಸ್ ಶಾಲೆಗೆ ಕರೆತರಲು ಅಗತ್ಯವಿರುವ ಎಲ್ಲಾ ಹಣವೂ ಲಭಿಸುತ್ತದೆ ಎಂದು ಹೇಳಿದೆ.
2017-2021 ರ ಅವಧಿಯಲ್ಲಿ ಚಿನ್ನ ಮತ್ತಿತರ ರೀತಿಯ ಮಾರಾಟ ಮಾಡುವಂತಹ ಸರಕುಗಳಿಂದ ಗಳಿಸಿಕೊಳ್ಳಬಹುದಾದ ಲಾಭವನ್ನು ಪಡೆದುಕೊಂಡಿರುವುದರ ಮೇಲೆ ಬಿಲಿಯನೇರ್ ಗೌತಮ್ ಅದಾನಿಗೆ ಒಂದು ಬಾರಿ ತೆರಿಗೆ ವಿಧಿಸಿದರೆ ಅದರಿಂದಲೇ 1.79 ಲಕ್ಷ ಕೋಟಿ ರೂಪಾಯಿ ಹಣ ಸಂಗ್ರಹವಾಗುತ್ತಿತ್ತು. ಇದರಿಂದಾಗಿ 5 ಮಿಲಿಯನ್ ಮಂದಿ ಭಾರತೀಯ ಪ್ರಾಥಮಿಕ ಶಿಕ್ಷಕರಿಗೆ ಒಂದು ವರ್ಷದ ಉದ್ಯೋಗ ನೀಡುವುದಕ್ಕೆ ಸಾಧ್ಯವಾಗುತ್ತಿತ್ತು ಎಂದು ಈ ವರದಿ ಹೇಳಿದೆ.
ಸರ್ವೈವಲ್ ಆಫ್ ರಿಚೆಸ್ಟ್ ಎಂಬ ಶೀರ್ಷಿಕೆಯಡಿ ಈ ವರದಿ ಪ್ರಕಟವಾಗಿದ್ದು, ಭಾರತೀಯರ ಶ್ರೀಮಂತರ ಒಟ್ಟಾರೆ ಸಂಪತ್ತಿನ ಮೇಲೆ ಒಂದು ಬಾರಿ ಶೇ.2 ರಷ್ಟು ತೆರಿಗೆ ವಿಧಿಸಿದರೆ, ಇಡೀ ದೇಶದಲ್ಲಿರುವ ಅಪೌಷ್ಟಿಕ ಮಕ್ಕಳಿಗೆ ಮುಂದಿನ 3 ವರ್ಷಗಳಿಗೆ ಪೌಷ್ಟಿಕತೆ ಒದಗಿಸಲು ಬೇಕಾಗುವ 40,423 ಕೋಟಿ ರೂಪಾಯಿ ಲಭ್ಯವಾಗುತ್ತದೆ ಎಂದು ವರದಿಯಲ್ಲಿ ಹೇಳಿದೆ.
ಇನ್ನು 10 ಶ್ರೀಮಂತ ಬಿಲಿಯನೇರ್ ಗಳಿಗೆ ಒಮ್ಮೆ ಶೇ.5 ರಷ್ಟು ತೆರಿಗೆ ವಿಧಿಸಿದರೆ (1.37 ಲಕ್ಷ ಕೋಟಿ), ಅದು 2022-23 ಕ್ಕೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ (86,200 ಕೋಟಿ) ಹಾಗೂ ಆಯುಷ್ ಸಚಿವಾಲಯ (3,050 ಕೋಟಿ) ರೂಪಾಯಿಗಳ ಅಂದಾಜಿಗಿಂತಲೂ 1.5 ಪಟ್ಟು ಹೆಚ್ಚಾಗಿರಲಿದೆ ಎಂದು ವರದಿ ಹೇಳಿದೆ.